ಹಂತಕನನ್ನು ಟೆಟ್ಸುಯಾ ಯಮಗಾಮಿ ಎಂದು ಗುರುತಿಸಲಾಗಿದೆ. ಈತ ಧಾರ್ಮಿಕ ಸಂಘಟನೆಯೊಂದರ ಜೊತೆ ನಂಟು ಬೆಳೆಸಿಕೊಂಡಿದ್ದ. ಈತನ ತಾಯಿ ಸಹ ಆ ಸಂಘಟನೆಗೆ ಸಾಕಷ್ಟು ಧನ ಸಹಾಯ ಮಾಡಿದ್ಲು. ಅಲ್ಲಿಯೇ ಈತ ಹೋಮ್‌ಮೇಡ್ ಗನ್ ಒಂದನ್ನು ಪ್ರಯೋಗಿಸಿ ನೋಡಿದ್ದ.
ಯಮಗಾಮಿಯ ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ಫೋಟಕಗಳು ಹಾಗೂ ಬಂದೂಕುಗಳು ಸಿಕ್ಕಿವೆ. ಶಿಂಜೊ ಅಬೆ ಹತ್ಯೆಗೆ ಬಳಸಿದ ಬಂದೂಕು ಕೂಡ ಅದೇ ಮಾದರಿಯಲ್ಲಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಯಮಗಾಮಿ ಹಲವು ಬಾರಿ ಮನೆಯಲ್ಲೇ ಬಂದೂಕು ತಯಾರಿಸಲು ಪ್ರಯತ್ನಿಸಿ ವಿಫಲನಾಗಿದ್ದ. ಕೊನೆಗೆ ಈ ಬಗ್ಗೆ ಸರಿಯಾದ ಮಾಹಿತಿ ಪಡೆಯಲು ಯುಟ್ಯೂಬ್ ನೋಡಿದ್ದಾನೆ.
ಶಿಂಜೊ ಅಬೆ ಹತ್ಯೆಗಾಗಿಯೇ ಆತ ತಯಾರಿಸಿದ್ದ ಬಂದೂಕು 6 ಸುತ್ತು ಗುಂಡು ಹಾರಿಸುವ ಸಾಮರ್ಥ್ಯದ್ದಾಗಿತ್ತು. ಶಾಟ್‌ಗನ್ ಮಾದರಿಯಲ್ಲೇ ಅದನ್ನು ಆತ ತಯಾರಿಸಿದ್ದಾನೆ. ಯಮಗಾಮಿಯ ಕಾರಿನಲ್ಲಿ ಮರದ ಹಲಗೆಗಳು ಪತ್ತೆಯಾಗಿವೆ. ಹತ್ಯೆಗೂ ಮುನ್ನ ಅಭ್ಯಾಸಕ್ಕಿಳಿದಿದ್ದ ಆತ ಆ ಹಲಗೆಗಳಿಗೆ ಗುಂಡು ಹಾರಿಸಿ ತಯಾರಿ ಮಾಡಿಕೊಂಡಿದ್ದ.
ಕೇವಲ ಬಂದೂಕು ಮಾತ್ರವಲ್ಲ ಬಾಂಬ್ ತಯಾರಿಸುವುದು ಯಮಗಾಮಿಯ ಗುರಿಯಾಗಿತ್ತು. ಆದ್ರೆ ಸಾಕಷ್ಟು ಬಾರಿ ಪ್ರಯತ್ನಿಸಿದ್ರೂ ಆತ ಅದರಲ್ಲಿ ಸಫಲನಾಗಿರಲಿಲ್ಲ. 41 ವರ್ಷದ ಯಮಗಾಮಿ ಜಪಾನ್‌ನ ನಾರಾ ನಗರದವನು. ಶಿಂಜೊ ಅಬೆ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಿದ್ದ. ಅಬೆ ಅವರ ರಾಜಕೀಯ ಧೋರಣೆಗಳನ್ನು ವಿರೋಧಿಸಿ ಈ ಕೃತ್ಯ ಎಸಗಿರುವುದಾಗಿ ಆತ ಹೇಳಿಕೊಂಡಿದ್ದಾನೆ.