ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಮಾಜಿ ಸಂಸದ ಡಿಕೆ ಸುರೇಶ್ ಮತ್ತೊಮ್ಮೆ ದೇಶ ವಿಭಜನೆ ಬಗ್ಗೆ ಮಾತನಾಡಿದ್ದಾರೆ.
ಈ ಹಿಂದೆ ಸಂಸದರಾಗಿದ್ದಾಗ ಡಿಕೆ ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡಿ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೊಮ್ಮೆ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಏನೂ ಕೊಡುಗೆ ನೀಡಿಲ್ಲ. ಹೀಗಾಗಿ ದೇಶ ವಿಭಜನೆ ಕೂಗು ಆರಂಭವಾಗಬಹುದು ಎನ್ನುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
ಬಜೆಟ್ ನಲ್ಲಿ ಕೇವಲ ಉತ್ತರ ಭಾರತ, ಗುಜರಾತ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮ ರಾಜ್ಯಕ್ಕೆ ಏನೂ ಅರ್ಹತೆಯಿಲ್ವಾ? ರಾಜ್ಯಕ್ಕೆ ಯೋಗ್ಯವಾದ ಆರ್ಥಿಕ ಯೋಜನೆ ನೀಡುವುದು ಕೇಂದ್ರದ ಕರ್ತವ್ಯವಾಗಿದೆ. ಆದರೆ ನಮ್ಮ ರಾಜ್ಯಕ್ಕೆ ಮತ್ತೆ ಮತ್ತೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಭಿಕ್ಷೆ ಕೇಳುತ್ತಿಲ್ಲ. ದಕ್ಷಿಣ ಭಾರತಕ್ಕೆ ಯಾವತ್ತೂ ಅನ್ಯಾಯವಾಗುತ್ತಿದೆ. ಬಜೆಟ್ ನಲ್ಲಿ ದಕ್ಷಿಣಕ್ಕೆ ಏನು ಯೋಜನೆ ಕೊಟ್ಟಿದ್ದೀರಿ? ವೋಟ್ ಕೇಳಿದ್ದು ಬಿಟ್ಟರೆ ಬೇರೆ ಏನೂ ಕೊಡುಗೆ ಇಲ್ಲ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ. ಇದೇ ರೀತಿ ಅನ್ಯಾಯ ಮುಂದುವರಿದರೆ ದೇಶ ವಿಭಜನೆ ಕೂಗು ಹೇಳಬಹುದು ಎಂದಿದ್ದಾರೆ.