Select Your Language

Notifications

webdunia
webdunia
webdunia
webdunia

ಮುಂದಿನ ವರ್ಷದೊಳಗೆ ವಿಧಾನಸೌಧದ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಮುಂದಿನ ವರ್ಷದೊಳಗೆ ವಿಧಾನಸೌಧದ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ
bangalore , ಸೋಮವಾರ, 27 ಜೂನ್ 2022 (19:16 IST)
ಮುಂದಿನ ವರ್ಷದೊಳಗೆ ವಿಧಾನಸೌಧದ ಮುಂದೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
 
ಅವರು ಇಂದು ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಮತ್ತು ನಾಡಪ್ರಭುಕೆಂಪೇಗೌಡ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಆಚರಿಸಿದರು.
 
ತನ್ನ ಬದುಕಿನ ಆದರ್ಶಗಳಿಂದಾಗಿ ಕೆಂಪೇಗೌಡರು ‘ನಾಡಪ್ರಭು’ ಎಂಬ ಬಿರುದನ್ನು ಪಡೆದು, ನಾಡಿನ ಸಮಗ್ರ ಚಿಂತನೆ ಮಾಡುವ ಮೂಲಕ ಪ್ರತಿ ಜನರ ಬದುಕಿಗೂ ಕೊಡುಗೆ ನೀಡಿದ್ದಾರೆ. ವಿಜಯನಗರ ಸಾಮ್ರಾಜ್ಯ, ಜನರನ್ನು ನಾಡು ಕಟ್ಟಲು ಬಳಕೆ ಮಾಡಿದ ಸುವರ್ಣ ಯುಗ. ಸಕಾರಾತ್ಕಕ ಧೋರಣೆಯಿಂದ ನಾಡನ್ನು ಕಟ್ಟಿದ ಶ್ರೇಯ ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರು ಹಾಕಿರುವ ಯೋಜನೆಗಳು, ಕನಸುಗಳು, ಅವರು ಕಟ್ಟಿರುವ ನಾಡನ್ನು ನಾವು ಬೆಳೆಸಿರುವ ಬಗ್ಗೆ ಸಿಂಹಾವಲೋಕನ ಮಾಡುವ ಸಂದರ್ಭವಿದು. ಬೆಂಗಳೂರು ಅಂತರರಾಷ್ಟ್ರೀಯ ನಗರ. ಕೆಂಪೇಗೌಡರು ಕೆರೆಕಟ್ಟೆಗಳನ್ನು, ಗ್ರಾಮಗಳನ್ನು ಕಟ್ಟಿದ್ದಾರೆ. ಸಮುದಾಯಗಳಿಗೆ ಹಾಗೂ ವ್ಯಾಪಾರಗಳಿಗೆ ಅವಕಾಶಗಳನ್ನು ಪೂರೈಸಿದ ದೂರದೃಷ್ಟಿಯ ನಾಯಕರಾಗಿದ್ದರು ಎಂದರು.
 
ವಿಸ್ತರಣೆಯಾಗಿರುವ ಬೆಂಗಳೂರಿಗೆ ಉತ್ತಮ ಮೂಲಭೂತ ಸೌಕರ್ಯ ಪೂರೈಕೆ:
ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದರ ಬಗ್ಗೆ ಸ್ಪಷ್ಟತೆ ಪಡೆದು ಕೆಲಸ ಮಾಡಿದರೆ ಯಾವುದೇ ಸಮಸ್ಯೆಯನ್ನೂ ಪರಿಹರಿಸಬಹುದು. ಸಮಸ್ಯೆಗಳನ್ನು ಆಯಾ ಕಾಲದಲ್ಲಿಯೇ ಪರಿಹರಿಸಬೇಕು.  ಪ್ರತಿದಿನ 5 ಸಾವಿರಕ್ಕಿಂತ ಹೆಚ್ಚು ಹೊಸ ವಾಹನಗಳು ರಸ್ತೆಗೆ ಇಳಿಯುತ್ತವೆ. ಬೆಂಗಳೂರು ನಗರದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆ ಜಾಸ್ತಿಯಾಗಿರುವುದು ವಾಸ್ತವಾಂಶ. ಬೆಂಗಳೂರಿನ ವಿಸ್ತರಣೆ ಬಹಳಷ್ಟು ಆಗಿದೆ. ಬೆಂಗಳೂರಿನಿಂದ 30-40 ಕಿ.ಮೀ. ವರೆಗೂ ನಗರ ಬೆಳೆದಿದ್ದು, ರಸ್ತೆ, ನೀರು,ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕಿದೆ. ಸಮಸ್ಯೆಯನ್ನು ಗುರುತಿಸಿ ಪರಿಹಾರ ನೀಡಬೇಕಿದೆ. ಬೆಂಗಳೂರಿಗೆ ಮುಂದಿನ 40 ವರ್ಷಗಳವರೆಗೂ ಬಳಸಬಹುದಾದಂತಹ ಉತ್ತಮ ಸಾರಿಗೆ ವ್ಯವಸ್ಥೆ, ಗಟ್ಟಿಮುಟ್ಟಾದ ರಸ್ತೆ, ಮೂಲಭೂತ ಸೌಕರ್ಯ ಹಾಗೂ ಸ್ಯಾಟಿಲೈಟ್ ಟೌನ್‍ಗಳನ್ನು ನಿರ್ಮಿಸುವ ಚಿಂತನೆ. ಬೆಂಗಳೂರು ನಗರದಲ್ಲಿ ಸಾರಿಗೆಯನ್ನು ಸರಾಗಗೊಳಿಸಿ, ನಗರವನ್ನು ಅಭಿವೃದ್ಧಿಗೊಳಿಸಲು ಚಿಂತಿಸಲಾಗುತ್ತಿದೆ ಎಂದರು.
 
ಬೆಂಗಳೂರನ್ನು ನಾಲ್ಕು ದಿಕ್ಕುಗಳಿಂದಲೂ ಅಭಿವೃದ್ಧಿಗೊಳಿಸುವ ಉದ್ದೇಶ :
ಬೆಂಗಳೂರಿನಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿದ 400 ವಿಶ್ವಮಟ್ಟದ ಸಂಶೋಧನಾ ಕೇಂದ್ರಗಳಿವೆ. 400 ಕ್ಕೂ ಹೆಚ್ಚು ಫಾರ್ಚೂನ್ ಕಂಪನಿಗಳಿವೆ. ಶೇ.43 ರಷ್ಟು ಎಫ್‍ಡಿಐ ಕರ್ನಾಟಕದಲ್ಲಿ ಆಗುತ್ತಿದೆ.  ಇವುಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ನೀಡುವ ಮೂಲಕ ಆಧುನಿಕ ಬೆಂಗಳೂರನ್ನು ನಿರ್ಮಿಸಲು ಸಾಧ್ಯ. ಬೆಂಗಳೂರಿನಲ್ಲಿನ ನಮ್ಮತನವನ್ನು ಉಳಿಸಿಕೊಂಡು ನಗರವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಕೋನವಿರಬೇಕು. ಬೆಂಗಳೂರು ನಾಲ್ಕು ದಿಕ್ಕುಗಳಿಂದಲೂ ಬೆಳೆಯಬೇಕು ಎಂಬ ನಾಡಪ್ರಭು ಕೆಂಪೇಗೌಡರ ಉದ್ದೇಶವಾಗಿತ್ತು. ಇದೇ ಮಾದರಿಯಲ್ಲಿ ಎಲ್ಲ ಸವಲತ್ತುಗಳಿರುವ ಬೆಂಗಳೂರು ನಗರವನ್ನು ಅಭಿವೃದ್ಧಿಪಡಿಸುವ ಸರ್ಕಾರದ ಚಿಂತನೆ ಕೆಂಪೇಗೌಡರೇ ಪ್ರೇರಣೆಯಾಗಿದ್ದಾರೆ ಎಂದರು.
 
ಎಸ್.ಎಂ.ಕೃಷ್ಣಾ ಅವರ ದೂರದೃಷ್ಟಿ ಬೆಂಗಳೂರಿನ ಅಭಿವೃದ್ಧಿಗೆ ಕಾರಣ :
ಕೆಂಪೇಗೌಡರ ಪ್ರಶಸ್ತಿಗೆ ಮಹತ್ವವನ್ನು ತಂದುಕೊಡುವ ಕೆಲಸ ಅವರಿಂದಾಗಿದೆ.  ಐಟಿ ಕ್ಷೇತ್ರವನ್ನು ಉತ್ಕಷ್ಟ ಮಟ್ಟಕ್ಕೆ ತಂದವರು ಎಸ್.ಎಂ.ಕೃಷ್ಣಾ ಅವರು. ಬೆಂಗಳೂರನ್ನು  ಸಿಂಗಪೂರ್ ಮಾಡುವುದಾಗಿ ಅಂದು ಅವರು ಹೇಳಿದ್ದರು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಬೆಂಗಳೂರನ್ನು ಸಿಂಗಾಪುರ ಮಾದರಿಯಲ್ಲಿ ಬೆಳೆಸಬಹುದಾಗಿತ್ತು. ಈಗಲಾದರೂ  ದೂರದೃಷ್ಟಿಯಿಂದ ಕೆಲಸ ಮಾಡುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಅವರ ದೂರದೃಷ್ಟಿ, ಕ್ರಿಯಾಶೀಲತೆ, ಬದ್ಧತೆ ಇವೆಲ್ಲವೂ ಬೆಂಗಳೂರಿನ ಅಭಿವೃದ್ಧಿಗೆ ಕಾರಣವಾಗಿವೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಯುವಕರು, ಸಮಾಜಸೇವಕರ ಪಾತ್ರ ದೊಡ್ಡದಿದೆ ಎಂದರು
 
ದೇಶದಲ್ಲಿಯೇ ಅತ್ಯುತ್ತಮ ವಿಮಾನನಿಲ್ದಾಣ:
ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಬಹುತೇಕ  ಟರ್ಮಿನಲ್ -2 ಉದ್ಘಾಟನೆಯ ಸಂದರ್ಭದಲ್ಲಿ ಅನಾವರಣ ಮಾಡಲಾಗುವುದು. ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಉದ್ದೇಶವಿದೆ. ಪ್ರತಿಮೆ ಕಾರ್ಯಕ್ಕೆ ಈಗಾಗಲೇ ಸುಮಾರು 85 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.  ಇದರೊಂದಿಗೆ 23 ಕೋಟಿ ರೂ. ಗಳನ್ನು ಸೌಂದರ್ಯೀಕರಣಕ್ಕೆ ಬಿಡುಗಡೆ ಮಾಡಲಾಗಿದೆ. ಕೆಂಪೇಗೌಡರ ಇತಿಹಾಸವನ್ನು ಬಿಂಬಿಸುವ ಕೆಲಸವನ್ನೂ ಇದು ಒಳಗೊಂಡಿದೆ.  ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಟರ್ಮಿನಲ್ -2  ಸಿದ್ಧವಾದಾಗ ದೇಶದಲ್ಲಿಯೇ ಅತ್ಯುತ್ತಮ ವಿಮಾನನಿಲ್ದಾಣವಾಗಲಿದೆ. ಆ ಸಂದರ್ಭದಲ್ಲಿ ಕೆಂಪೇಗೌಡದ ಹೆಸರು ಶಾಶ್ವತವಾಗಿ ಉಳಿಯುವಂಥ ಕೆಲಸವಾಗಿದೆ.  ನಾಡು ಕಟ್ಟಿದ ಕೆಂಪೇಗೌಡರ ಹೆಸರು  ಇತಿಹಾಸದಲ್ಲಿ ಶಾಶ್ವತವಾಗಿ  ಉಳಿಯುವ ಕೆಲಸವಾಗಿದೆ ಎಂದರು.
 
ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ :
ಮಾಗಡಿಯಲ್ಲಿ ಸುಮಾರು 50 ಕೋಟಿ ರೂ.ಗಳ ವೆಚ್ಚದಲ್ಲಿ  ನಾಡಪ್ರಭುಗಳ  ಇತಿಹಾಸ ಬಿಂಬಿಸುವ ಕೆಲಸವಾಗುತ್ತಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕೆಂದು 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 100 ಕೋಟಿ ರೂ.ಗಳ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣ ಮಾಡುತ್ತೇವೆ.  ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.  ಸಮುದಾಯವನ್ನು ಕಟ್ಟಲೆಂದು ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ ನೀಡಲಾಗುತ್ತಿದೆ. ಇದರ ರೂಪುರೇಷೆಗಳನ್ನು  ಸಿದ್ಧಪಡಿಸಿ ಜುಲೈ ತಿಂಗಳಲ್ಲಿ ಅದಕ್ಕೆ ಚಾಲನೆ ನೀಡಲಾಗುವುದು ಎಂದರು.
 
ಕೆಂಪೇಗೌಡರು ಇಡೀ ನಾಡಿಗೆ ಸೇರಿದವರು
ಕೆಂಪೇಗೌಡರು ಇಡೀ ನಾಡಿಗೆ ಸೇರಿದವರು.  ಕೆಂಪೇಗೌಡರ ಕೀರ್ತಿ, ಶ್ರೇಯಸ್ಸಿಗೆ ಇನ್ನಷ್ಟು ಮೆರಗು ಕೊಡುವ ರೀತಿಯಲ್ಲಿ ಕರ್ನಾಟಕವನ್ನು ಕಟ್ಟಬೇಕಿದೆ. ಆಡಳಿತ ಮಾಡುವ ಸಂದರ್ಭದಲ್ಲಿ ಕಟ್ಟಕಡೆಯ ವ್ಯಕ್ತಿಯ  ಕಣ್ಣೀರು ಒರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಿದೆ. ಹಲವಾರು ಸವಾಲುಗಳಿವೆ. ಸವಾಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಕರ್ನಾಟಕದ ಅಭಿವೃದ್ಧಿ ಮಾಡುತ್ತೇವೆ, ನವ ಕರ್ನಾಟಕದಿಂದ ನವ ಭಾರತದ ಅಭಿವೃದ್ಧಿ ಮಾಡುತ್ತೇವೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಲಯಾಳಂ ನಟ ವಿಜಯ್‌ ಬಾಬು ಅರೆಸ್ಟ್!