ಬೆಂಗಳೂರು: ನಿನ್ನೆಯಷ್ಟೇ ಹೊಸ ವರ್ಷಕ್ಕೆ ಬೆಂಗಳೂರಿಗರಿಗೆ ನೀರಿನ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿತ್ತು. ಇದೀಗ ವಿದ್ಯುತ್ ಬೆಲೆ ಏರಿಕೆಯ ಸುದ್ದಿ ಕೇಳಿಬರುತ್ತಿದೆ.
ಈಗಾಗಲೇ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಜಲಾಶಯಗಳು ಭರ್ತಿಯಾಗಿದೆ. ಇದರಿಂದ ಈ ಬಾರಿ ಜಲವಿದ್ಯುತ್ ಉತ್ಪಾದನೆಗೆ ಯಾವುದೇ ಸಮಸ್ಯೆಯಾಗದು. ಆದರೆ ಇದರ ನಡುವೆಯೂ ವಿದ್ಯುತ್ ಸರಬರಾಜು ಕಂಪನಿ ಎಸ್ಕಾಂ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮುಂದಿನ ಮೂರು ವರ್ಷಗಳ ವಿದ್ಯುತ್ ಬೆಲೆಯನ್ನು ಒಂದೇ ಬಾರಿಗೆ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.
ಸದ್ಯಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ ಯೋಜನೆಯಿಂದಾಗಿ ಗ್ರಾಹಕರಿಗೆ ಉಚಿತ ವಿದ್ಯುತ್ ಲಭ್ಯವಾಗುತ್ತಿದೆ. ಆದರೆ ಒಂದು ವೇಳೆ ಈ ಯೋಜನೆ ರದ್ದಾದರೆ ಸಾರ್ವಜನಿಕರಿಗೆ ವಿದ್ಯುತ್ ಬೆಲೆ ಏರಿಕೆ ನಿಜಕ್ಕೂ ಶಾಕ್ ನೀಡಿದಂತಾಗಲಿದೆ.
2025-26 ನೇ ಸಾಲಿಗೆ ಪ್ರತೀ ಯೂನಿಟ್ ಗೆ 65-70 ಪೈಸೆ, 2026-27 ನೇ ಸಾಲಿಗೆ ಅನ್ವಯವಾಗುವಂತೆ 70-75 ಪೈಸೆ, 2027-28 ನೇ ಸಾಲಿಗೆ ಅನ್ವಯವಾಗುವಂತೆ ಪ್ರತೀ ಯೂನಿಟ್ ಗೆ 85-90 ಪೈಸೆ ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯ ವಾಸ್ತವಾಂಶಗಳು, ಉದ್ಯಮಿಗಳು, ತಜ್ಞರ ಸಲಹೆಗಳನ್ನು ಆಲಿಸಿ ಮಾರ್ಚ್ ವೇಳೆಗೆ ಸ್ಪಷ್ಟ ಆದೇಶ ಹೊರಬೀಳುವ ಸಾಧ್ಯತೆಯಿದೆ. ಒಂದು ವೇಳೆ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಮೂರು ವರ್ಷದ ವಿದ್ಯುತ್ ದರ ಏರಿಕೆ ಒಮ್ಮೆಗೇ ಅನ್ವಯವಾಗಲಿದೆ.