ಕೊಡಗು ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಮತ್ತು ಗ್ರಾಮೀಣ ಕುಡಿಯುವ ನೀರು ವಿಭಾಗದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಕಾಡುತ್ತಿದ್ದು, ಇದರಿಂದ ಗುತ್ತಿಗೆದಾರರಿಗೆ ಪೂರ್ಣಗೊಂಡ ಕಾಮಗಾರಿಯ ಯಾವುದೇ ಬಿಲ್ ಪಾವತಿಯಾಗುತ್ತಿಲ್ಲ ಎಂದು ಮಡಿಕೇರಿ ತಾಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಪಿ.ರಾಜೀವ ಲೋಚನ ಅವರು, ಮುಂದಿನ 15 ದಿನಗಳೊಳಗಾಗಿ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದಿದ್ದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಕಚೇರಿ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆಯಿಂದ ಗುತ್ತಿಗೆದಾರರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಸಮಸ್ಯೆಗಳು: ಪೂರ್ಣಗೊಂಡ ಮಳೆ ಹಾನಿ ಕಾಮಗಾರಿ ವೀಕ್ಷಿಸಲು 3ನೇ ಪಾರ್ಟಿ ವರದಿ ನೀಡುವ ಅಧಿಕಾರವನ್ನು ಈ ಮೊದಲಿನಂತೆ 2 ಸಂಸ್ಥೆ (ಇಂಜಿನಿರಿಂಗ್ ಕಾಲೇಜು ಕುಶಾಲನಗರ ಮತ್ತು ಕೆ.ಎ.ಜಿ ಇಂಜಿನಿರಿಂಗ್ ಸುಳ್ಯ) ಗಳಿಗೆ ನೀಡುವಂತೆ ಹಲವು ಬಾರಿ ಜಿಲ್ಲಾಧಿಕಾರಿಗಳನ್ನು ಸಂರ್ಪಕಿಸಿ, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಗುತ್ತಿಗೆದಾರರಿಗೆ ಬಿಲ್ ಪಾವತಿ ಸರಿಯಾದ ಸಮಯಕ್ಕೆ ಆಗುತ್ತಿಲ್ಲ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಪ್ರಭಾರವಾಗಿ ಗ್ರಾಮೀಣ ಕುಡಿಯುವ ನೀರು ಇಲಾಖೆಗೆ ನಿಯೋಜನೆಗೊಳಿಸಲಾಗಿದೆ. ಈ ಕಾರಣದಿಂದ ಇಂಜಿನಿಯರಿಂಗ್ ವಿಭಾಗದಲ್ಲಿ ಯಾವುದೇ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ಆದ್ದರಿಂದ ಮೂಲ ಇಲಾಖೆಗೆ ನಿಯುಕ್ತಿಗೊಳಿಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕಾಮಗಾರಿಗಳನ್ನು ಎಲ್ಲಾ ಗುತ್ತಿಗೆದಾರರಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಆ ಮೂಲಕ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು.
ಲೆಕ್ಕಶೀರ್ಷಿಕೆ 50-54 ಮತ್ತು ಇತರ ಲೆಕ್ಕ ಶೀರ್ಷಿಕೆಯಡಿಯಲ್ಲಿ ಕಾಮಗಾರಿಯು ಪೂರ್ಣಗೊಂಡು 2 ವರ್ಷ ಕಳೆದರೂ ಇದುವರೆಗೆ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ. ಇದನ್ನು ಕೂಡ ಪರಿಗಣಿಸಿ ಹಣ ಬಿಡುಗಡೆ ಮಾಡಬೇಕೆಂದು ಬಿ.ಪಿ.ರಾಜೀವ ಲೋಚನ ಒತ್ತಾಯಿಸಿದರು.