Select Your Language

Notifications

webdunia
webdunia
webdunia
webdunia

ಬೇಜವಾಬ್ದಾರಿ, ಆಧಾರರಹಿತ ಹೇಳಿಕೆ ಕೊಡದಿರಿ- ಕಾಂಗ್ರೆಸ್ಸಿಗರಿಗೆ ಅಶ್ವತ್ಥನಾರಾಯಣ್ ಎಚ್ಚರಿಕೆ

ಬೇಜವಾಬ್ದಾರಿ, ಆಧಾರರಹಿತ ಹೇಳಿಕೆ ಕೊಡದಿರಿ- ಕಾಂಗ್ರೆಸ್ಸಿಗರಿಗೆ ಅಶ್ವತ್ಥನಾರಾಯಣ್ ಎಚ್ಚರಿಕೆ
bangalore , ಶನಿವಾರ, 7 ಆಗಸ್ಟ್ 2021 (21:06 IST)
ಬೆಂಗಳೂರು: ರಾಜ್ಯದ ಸಚಿವ ಸಂಪುಟ ಕೆಲವೇ ದಿನಗಳಲ್ಲಿ ವಿಸ್ತರಣೆ ಆಗಲಿದೆ. ಸರಕಾರವು ಉತ್ತಮವಾಗಿ ಕೆಲಸ ಮಾಡಲಿದೆ. ವಿರೋಧ ಪಕ್ಷಗಳು ಕಾಲೆಳೆಯುವ ಪ್ರವೃತ್ತಿಯನ್ನು ಕೈಬಿಟ್ಟು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಆಧಾರರಹಿತ ಹಾಗೂ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶ್ವತ್ಥನಾರಾಯಣ್ ಅವರು ಪಕ್ಷದ ರಾಜ್ಯ ಘಟಕದ ಪರವಾಗಿ ಎಚ್ಚರಿಕೆ ನೀಡಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಹಾದಿಬೀದಿಗಳಲ್ಲಿ ಸರಕಾರದ ವಿರುದ್ಧ ಅಪಪ್ರಚಾರದ ಹುನ್ನಾರಕ್ಕೆ ಸಿದ್ದರಾಮಯ್ಯ ಮುಂದಾಗಿದ್ದರು. ಶ್ರೀ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ಬಳಿಕ ಈಗ ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಇಲ್ಲ ಎಂಬ ಮಾತನಾಡಲು ಆರಂಭಿಸಿದ್ದಾರೆ. ನೀವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದೀರಿ. ಯಾಕೆ ಕಿತ್ತು ಹಾಕಿದಿರಿ? ನೀವು ಕಾರಣ ಕೊಡಬೇಕಲ್ಲವೇ? ಮಂಡ್ಯದ ಅಂಬರೀಷ್ ಅವರನ್ನು ಮಂತ್ರಿ ಪದವಿಯಿಂದ ಏಕಾಏಕಿ ಕಿತ್ತು ಹಾಕಿದ್ದಕ್ಕೆ ಉತ್ತರ ಕೊಟ್ಟಿದ್ದೀರಾ? ಮಂಗಳೂರಿ£ ಹಿರಿಯ ನಾಯಕರು, ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದ ಜನಾರ್ದನ ಪೂಜಾರಿ ಅವರನ್ನು ಮೂಲೆಗುಂಪು ಮಾಡಿದ್ದಕ್ಕೆ ಕಾರಣ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಇದಲ್ಲದೇ ಮೈಸೂರು ಭಾಗದಲ್ಲಿ ಹಿರಿಯ ಮುತ್ಸದ್ಧಿ ನಾಯಕರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು ನೀವು ನಡೆಸಿಕೊಂಡ ರೀತಿ ಏನು? ಒಂದೆರಡಲ್ಲ; ಇಂಥ ಹತ್ತಾರು ಉದಾಹರಣೆಗಳಿವೆ. ಡಾ. ಪರಮೇಶ್ವರ್ ಅವರು ಗೆಲ್ಲದಂತೆ ನೋಡಿಕೊಂಡಿರಿ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗೆ ಒಂದು ವರ್ಷ ತುಂಬುತ್ತಿದ್ದರೂ ನಿಮ್ಮದೇ ದಲಿತ ಸಮುದಾಯದ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಆಗಲಿಲ್ಲವೇಕೆ ಎಂದು ಅವರು ಕೇಳಿದರು.
ನಿಮ್ಮ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಕಲಹವನ್ನು ಮೊದಲು ಸರಿ ಮಾಡಿಕೊಳ್ಳಿ. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಆಗಬೇಕೇ ಅಥವಾ ನಲಪಾಡ್ ಆಗಬೇಕೇ ಎಂಬ ಗೊಂದಲ ನಿವಾರಿಸಿ. ಡಿ.ಕೆ.ಶಿವಕುಮಾರ್ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಮೊದಲು ಸರಿ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ ಅವರು, ನಮ್ಮ ಪಕ್ಷದ ಕೇಂದ್ರ ನಾಯಕರ ನಿರ್ಧಾರದ ಬಗ್ಗೆ ನೀವು ಹೇಳಿಕೆ ನೀಡುವ ಅವಶ್ಯಕತೆ ಇಲ್ಲ ಎಂದರು.
ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಏಳು ವರ್ಷಗಳ ಕಾಲ ಸುಭದ್ರ ಅಭಿವೃದ್ಧಿಪರ ಸರಕಾರ ಅಧಿಕಾರದಲ್ಲಿದೆ. ರಾಜ್ಯದಲ್ಲೂ ಶ್ರೀ ಯಡಿಯೂರಪ್ಪ ಅವರು ಎರಡು ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿದ್ದಾರೆ. ಕೋವಿಡ್ ಸಂಕಷ್ಟಕ್ಕೆ ಸಮರ್ಥವಾಗಿ ಎರಡೂ ಸರಕಾರಗಳು ಸ್ಪಂದಿಸಿವೆ. ಇದರ ಚರ್ಚೆಗೆ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ನಿಮಗೆಲ್ಲ ರಾಜಕೀಯ ಜಾಗೃತಿ ಇದೆಯೇ ಎಂದು ಕೇಳಿದರು.
ಹೊಸ ಮುಖ್ಯಮಂತ್ರಿಗಳು ಅನುಭವಿ ರಾಜಕಾರಣಿ. ಅವರ ತಂದೆಯೂ ಕೇಂದ್ರದಲ್ಲಿ ಸಚಿವರಾಗಿ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಕುಟುಂಬದ ಹಿನ್ನೆಲೆಯಿಂದ ಬಂದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕ್ಲೀನ್ ಇಮೇಜ್ ಇರುವ ಯುವನಾಯಕ. ವಿರೋಧ ಪಕ್ಷವಾಗಿ ನೀವು ಅವರಿಗೆ ಸಕಾರಾತ್ಮಕವಾಗಿ ಬೆಂಬಲ ಕೊಡಬೇಕಿತ್ತು. ಅದರ ಬದಲಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಅವರನ್ಯಾಕೆ ತೆಗೆದಿರಿ, ಇವರನ್ಯಾಕೆ ಸಿಎಂ ಮಾಡಿದ್ದೀರಿ ಎಂದು ಪ್ರಶ್ನಿಸುವುದು ಸರಿಯಲ್ಲ ಎಂದು ತಿಳಿಸಿದರು.
ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆಗಸ್ಟ್ 2ರಂದು ಒಂದು ವರ್ಷ ಪೂರ್ಣಗೊಳ್ಳಲಿದೆ. ಆವತ್ತಿನಿಂದ ಇವತ್ತಿನ ವರೆಗೆ ಡಿ.ಕೆ.ಶಿವಕುಮಾರ್ ಅವರು ಸುದ್ದಿಯಲ್ಲಿರುವುದು ಸಿದ್ದರಾಮಯ್ಯ ಅªರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಿದ್ದರಾವiಯ್ಯ ಅವರು ನಿರಂತರವಾಗಿ ಆಧಾರರಹಿತ ಹೇಳಿಕೆಗಳನ್ನು ಕೊಡುವುದನ್ನು ಚಾಳಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
2020ರ ಆಗಸ್ಟ್ 2ರಂದು ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಿ 3ರಂದು ಸುದ್ದಿ ಬಂದ ತಕ್ಷಣ ಸಿದ್ದರಾಮಯ್ಯ ಅವರಿಗೆ ತಡೆಯಲಾಗಲಿಲ್ಲ. ಅದೇ ಕಾರಣಕ್ಕೆ ಮರುದಿನ, ಆಗಸ್ಟ್ 3ರಂದು ಸಿದ್ದರಾಮಯ್ಯ ಅವರು ರಾಜ್ಯ ಸರಕಾರ ಕೋವಿಡ್ ನಿರ್ವಹಣೆಯಲ್ಲಿ 2,500 ಕೋಟಿ ರೂಪಾಯಿ ಅವ್ಯವಹಾರ ಮಾಡಿದೆ ಎಂದು ಆಧಾರರಹಿತ ಆರೋಪ ಮಾಡಿದ್ದರು ಎಂದು ವಿವರಿಸಿದರು. ಈ ವಿಚಾರವಾಗಿ ಅವರು ಇಂದಿನವರೆಗೆ ಅವರು ದಾಖಲೆಗಳೊಂದಿಗೆ ವಿಧಾನಸಭೆ, ಪರಿಷತ್ತಿನಲ್ಲಿ ಚರ್ಚಿಸಿಲ್ಲ ಎಂದು ತಿಳಿಸಿದರು.
ಇದರ ಸಂಬಂಧ ಉಪ ಮುಖ್ಯಮಂತ್ರಿಗಳಾಗಿದ್ದ ಡಾ. ಅಶ್ವತ್ಥನಾರಾಯಣ್, ಹಿಂದಿನ ಆರೋಗ್ಯ ಸಚಿವರು ಸೇರಿ ಐವರು ಸಚಿವರು ಪತ್ರಿಕಾಗೋಷ್ಠಿ ಮಾಡಿ, ಸ್ಯಾನಿಟೈಸರ್, ಪಿಪಿಇ ಕಿಟ್ ಮತ್ತಿತರ ವೈದ್ಯಕೀಯ ಉಪಕರಣ ಖರೀದಿ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದರು. ಪ್ರತಿಯೊಂದು ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದರು. ಆದರೆ, ಇದಕ್ಕೆ ಸಿದ್ದರಾಮಯ್ಯ ಉತ್ತರ ನೀಡಲಿಲ್ಲ. ಬದಲಾಗಿ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಅಧಿವೇಶನಗಳನ್ನು ವಿನಾಕಾರಣ ಬಹಿಷ್ಕರಿಸುವ ಚಾಳಿಯನ್ನು ಕಾಂಗ್ರೆಸ್ ಪಕ್ಷ ಮುಂದುವರಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯದ ಮುಖ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಬುದ್ಧಿಭ್ರಮಣೆಯಾದ ಸಂದರ್ಭದಲ್ಲಿ ಮಾತ್ರ ಇಂಥ ಅಪ್ರಸ್ತುತ, ಬೇಜವಾಬ್ದಾರಿಯ ಹೇಳಿಕೆ ನೀಡಲು ಸಾಧ್ಯ ಎಂದರಲ್ಲದೆ, “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ” ಎಂಬ ದಾಸರ ಪದವನ್ನು ಉಲ್ಲೇಖಿಸಿದರು. ಇದು ಸಿದ್ದರಾಮಯ್ಯ ಮತ್ತು ಆ ಪಕ್ಷದ ಕೆಲವು ಮುಖಂಡರಿಗೆ ಹೆಚ್ಚು ಅನ್ವಯವಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಬಹಳ ಹಿಂದಿನಿಂದಲೂ ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಪಿ.ವಿ.ನರಸಿಂಹ ರಾವ್, ಕೇಸರಿ ಅವರ ಜೊತೆ ಹೇಗೆ ವರ್ತಿಸಿದ್ದರು, ಅವರನ್ನು ಯಾವ ರೀತಿ ನೋಡಿಕೊಂಡರು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಪಿ.ವಿ.ನರಸಿಂಹರಾವ್ ಜನ್ಮ ಶತಾಬ್ದಿ ವರ್ಷದಲ್ಲಿ ಕನಿಷ್ಠ ಅವರನ್ನು ಸೌಜನ್ಯಕ್ಕಾದರೂ ನೆನಪು ಮಾಡಿಕೊಳ್ಳದ ಕಾಂಗ್ರೆಸ್ ಪಕ್ಷ ಇವತ್ತು ಕರ್ನಾಟಕದಲ್ಲಿ ನಮಗೆ ಬುದ್ಧಿ ಹೇಳುತ್ತಿದೆ ಎಂದು ಆಕ್ಷೇಪಿಸಿದರು. ಇನ್ನಾದರೂ ಸಿದ್ದರಾಮಯ್ಯ ಅವರಿಗೆ ಈ ಅರಳುಮರುಳಿನ ಸಂದರ್ಭದಲ್ಲಿ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಆಶಿಸಿದರು.
ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕಾಪಾಡಿಕೊಳ್ಳಬೇಕು. ಲಸಿಕೆಯನ್ನು ಪಡೆದುಕೊಳ್ಳಬೇಕು. ಈ ಮೂಲಕ ಕೋವಿಡ್ ನಿಭಾಯಿಸಲು ಜನರು ಸರಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಶ್ರೀ ಛಲವಾದಿ ನಾರಾಯಣಸ್ವಾಮಿ ಮತ್ತು ರಾಜ್ಯ ವಕ್ತಾರರಾದ ಶ್ರೀ ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಆಯುಕ್ತರಿಂದ ರಸ್ತೆ ಕಾಮಗಾರಿ ತಪಾಸಣೆ