ಕರೂರಿನಲ್ಲಿ ಕಾಲ್ತುಳಿತ ಸಂಭವಿಸಿ 41 ಜನರನ್ನು ಬಲಿತೆಗೆದುಕೊಂಡ ಒಂದು ತಿಂಗಳ ನಂತರ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ-ಅಧ್ಯಕ್ಷ ಮತ್ತು ನಟ ವಿಜಯ್ ಅವರು ಅಂತಿಮವಾಗಿ ಸೋಮವಾರ ಸಂತ್ರಸ್ತರನ್ನು ಭೇಟಿಯಾದರು. ಅಕ್ಟೋಬರ್ 27 ರಂದು ಚೆನ್ನೈನ ಮಾಮಲ್ಲಪುರಂನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ದುಃಖಿತ ಕುಟುಂಬಗಳನ್ನು ಭೇಟಿ ಮಾಡಿದರು.
ದುಃಖದಲ್ಲಿರುವ ಕುಟುಂಬಗಳನ್ನು ಭೇಟಿ ಮಾಡಲು ವಿಜಯ್ ಕರೂರ್‌ಗೆ ಭೇಟಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ, ವಿಜಯ್ ಅವರ ಭದ್ರತೆ ಮತ್ತು ಸಾರಿಗೆ ಕಾಳಜಿಯನ್ನು ಉಲ್ಲೇಖಿಸಿ ಬಸ್‌ಗಳಲ್ಲಿ ಅವರನ್ನು ರೆಸಾರ್ಟ್‌ಗೆ ಕರೆತರಲಾಯಿತು.
230 ಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಸುಮಾರು 37 ಕುಟುಂಬಗಳನ್ನು ವಿಜಯ್ ಅವರು ಪ್ರತ್ಯೇಕ ಪ್ರತ್ಯೇಕ ಕೋಣೆಯಲ್ಲಿ ಮಾತನಾಡಿಸಿದರು. ಇದು ಮಾಧ್ಯಮ ಅಥವಾ ಸಾರ್ವಜನಿಕರಿಗೆ ಮುಕ್ತವಾಗಿರಲಿಲ್ಲ.
ವರದಿಗಳ ಪ್ರಕಾರ, ವಿಜಯ್ ಅವರು ಪ್ರತಿ ಕುಟುಂಬವನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು, ಸಾಂತ್ವನ ಹೇಳಿದರು ಮತ್ತು ಅವರಿಗೆ ನಿರಂತರ ಬೆಂಬಲದ ಭರವಸೆ ನೀಡಿದರು. ಅವರು ತಮ್ಮ ಜೀವನೋಪಾಯದ ಪರಿಸ್ಥಿತಿಗಳು, ಸಾಲಗಳು ಮತ್ತು ಮಕ್ಕಳ ಶಿಕ್ಷಣದ ಬಗ್ಗೆ ಲಿಖಿತ ವಿವರಗಳನ್ನು ಸಂಗ್ರಹಿಸಿ ಹೆಚ್ಚುವರಿ ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ ಎಂದು ವರದಿಯಾಗಿದೆ.
"ನೀವು ನನ್ನನ್ನು ನಿಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬ ಎಂದು ಪರಿಗಣಿಸಬಹುದು. ನಾನು ನಿಮ್ಮ ನೋವನ್ನು ಹಂಚಿಕೊಳ್ಳುತ್ತೇನೆ ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ" ಎಂದು ವಿಜಯ್ ಕುಟುಂಬಗಳಿಗೆ ಹೇಳಿದ್ದು, ದುರಂತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ವಿಜಯ್ ಅವರು ಕುಟುಂಬಗಳಿಗೆ ಸ್ವತಃ ಚಹಾವನ್ನು ಬಡಿಸಿದರು ಮತ್ತು ಪ್ರತಿ ಕೋಣೆಯಲ್ಲಿ ಇರಿಸಲಾಗಿರುವ ಮೃತರ ಫೋಟೋಗಳಿಗೆ ಪುಷ್ಪ ನಮನ ಸಲ್ಲಿಸಿದರು ಎಂದು ವರದಿಗಳು ತಿಳಿಸಿವೆ.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ವಿಜಯ್ ರ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದರು.