Publish Date: Sat, 29 Dec 2018 (13:23 IST)
Updated Date: Sat, 29 Dec 2018 (13:30 IST)
ಬೆಂಗಳೂರು: ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಹೆಚ್1ಎನ್1 ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಹೈದ್ರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಇದೀಗ ಇವರ ಅಕಾಲಿಕ ಮರಣಕ್ಕೆ ಸಚಿವ ಡಿಕೆ ಶಿವಕುಮಾರ್ ಸಂಶಯ ವ್ಯಕ್ತಪಡಿಸಿದ್ದಾರೆ.
ಮಧುಕರ್ ಶೆಟ್ಟಿ ಅವರ ಸಾವಿಗೆ ಸಂತಾಪ ಸೂಚಿಸಿ ಪ್ರತಿಕ್ರಿಯೆ ನೀಡಿದ ಅವರು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಮಧುಕರ್ ಶೆಟ್ಟಿ ಅವರ ಸಾವು ಸಹಜವಾಗಿದೆಯೇ, ಅಸಹಜ ಸಾವೇ ಎಂಬ ಬಗ್ಗೆ ತನಿಖೆ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಮಧುಕರ್ ಶೆಟ್ಟಿ ನನಗೆ ಹತ್ತಿರದಿಂದ ಪರಿಚಯ. ನಮ್ಮಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಅವರ ನಿಧನ ಸುದ್ದಿ ಕೇಳಿ ಆಶ್ಚರ್ಯವಾಯ್ತು. ಅವರ ನಿಧನ ಸ್ವಾಭಾವಿಕವಾನಾ ಅಂತ ತನಿಖೆ ಮಾಡಬೇಕಾಗಿದೆ. ಪೊಲೀಸ್ ಇಲಾಖೆಗೆ ಅವರೊಂದು ದೊಡ್ಡ ಆಸ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಕುಟುಂಬಕ್ಕೆ ಧೈರ್ಯ ಕೊಡಲಿ ಅಂತ ಡಿಕೆಶಿ ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಒಬ್ಬ ಅಧಿಕಾರಿ ಹೊರ ರಾಜ್ಯದಲ್ಲಿ ನಿಧನ ಹೊಂದಿದರೆ ಆ ಬಗ್ಗೆ ತನಿಖೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಡಿಕೆಶಿ ಹೇಳಿಕೆ ನೀಡಿದ್ದಾರೆ.