Select Your Language

Notifications

webdunia
webdunia
webdunia
webdunia

ಕುಮಾರಸ್ವಾಮಿ ನನಗೆ ಮರ್ಯಾದೆ ಕೊಟ್ಟರೆ, ನಾನು ಕೊಡುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

DK Shivakumar

Krishnaveni K

ಬೆಂಗಳೂರು , ಮಂಗಳವಾರ, 16 ಏಪ್ರಿಲ್ 2024 (14:59 IST)
ಬೆಂಗಳೂರು: ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಈಗಲೂ ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ. ಅವರು ನನಗೆ ಗೌರವ ಕೊಟ್ಟರೆ, ನಾನು ಅದೇ ಗೌರವ ಕೊಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
 
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ನೀವು ಕೊಟ್ಟಿರುವ ಚರ್ಚೆ ಸವಾಲನ್ನು ಕುಮಾರಸ್ವಾಮಿ ಅವರು ಸ್ವೀಕರಿಸುತ್ತಿಲ್ಲ ಯಾಕೆ ಎಂದು ಮಾಧ್ಯಮಗಳು ಕೇಳಿದಾಗ ಶಿವಕುಮಾರ್ ಅವರು ಉತ್ತರಿಸಿದ್ದು ಹೀಗೆ;
 
“ನಾನು ಕುಮಾರಸ್ವಾಮಿ ಅವರಿಗೆ ಗೌರವ ನೀಡುತ್ತಿದ್ದರೂ ಅವರು ಪದೇ ಪದೆ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಆಧಾರರಹಿತ ಟೀಕೆ ಮಾಡುತ್ತಿದ್ದಾರೆ. ನಾನು ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ನನ್ನ ಜಮೀನಿನ ಬಂಡೆಯನ್ನು ಕಾನೂನುಬದ್ಧವಾಗಿ ಒಡೆದಿದ್ದೇನೆ. ನಾವು ಹಿರಿಯರಿಗೆ ಗೌರವ ನೀಡುವುದೇ ಅವರಿಂದಲೂ ಅದನ್ನು ಸ್ವೀಕರಿಸಲು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದು ನೋಡಿ. ನಮ್ಮಂತಹವರನ್ನು, ಅಂದರೆ ಸಮುದಾಯವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು ಅವರು ಏನೇ ಅಂದರೂ ಸಹಿಸಿಕೊಂಡಿದ್ದೇನೆ. ಅವರು ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಮಾತನಾಡೋಣ” ಎಂದು ತಿಳಿಸಿದರು. 
 
ಅವರ ನುಡಿಮುತ್ತು ಮರೆಮಾಚಲು ನನ್ನ ಮೇಲೆ ಆರೋಪ:
ಎನ್ ಒಸಿ ನೀಡಲು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕುತ್ತಿದ್ದೀರಿ ಎಂಬಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, “ನಾವು ನೀರಿನ ಕಷ್ಟಕಾಲದಲ್ಲೂ ಬೆಂಗಳೂರಿನ ಎಲ್ಲಾ ಜನರಿಗೂ ಕುಡಿಯಲು ನೀರು ಪೂರೈಸುತ್ತಿದ್ದೇವೆ.

ಕುಮಾರಸ್ವಾಮಿ ಅವರು ತಮ್ಮ ನುಡಿಮುತ್ತುಗಳನ್ನು ಮರೆ ಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಮಾಧ್ಯಮಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಆ ರೀತಿ ಮಾತನಾಡಿ ಎಂದು ಹೇಳಿದವರು ಯಾರು. ನಾನು ಆ ವಿಚಾರ ಬಿಡುತ್ತೇನೆ. ಆದರೆ ಅವರ ಮಾತುಗಳಿಂದ ಮಹಿಳೆಯರಿಗೆ ಆಗಿರುವ ಅಪಮಾನವನ್ನು ಅವರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲ. ಇದು ರಾಜ್ಯದ ವಿಚಾರವಾಗಿದ್ದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ಮಹಿಳೆಯರು ಹಾಗೂ ಅವರ ಸ್ವಾಭಿಮಾನದ ವಿಚಾರ. ಇವರ ವಿಚಾರ ಬಿಡಿ. ನಮ್ಮ ಗುರಿ ಬಿಜೆಪಿ. ಕುಮಾರಸ್ವಾಮಿ ಅವರು ಹೇಳಿಕೆ ಕೊಟ್ಟರು ಸರಿ, ಬಿಜೆಪಿಯವರು ಯಾಕೆ ಆ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ಯಡಿಯೂರಪ್ಪ, ಅಶೋಕ್ ಅವರು ಈ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ?” ಎಂದರು.
 
ಆರ್.ಅಶೋಕ್ ಒಕ್ಕಲಿಗ ನಾಯಕನಲ್ಲ ಎಂಬ ಆರ್ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ನಾಯಕನೇ ಅಲ್ಲ. ಅವರು ನಾಯಕರು, ದೊಡ್ಡ ನಾಯಕರು. ನಾನು ಸಾಮಾನ್ಯ ಕಾರ್ಯಕರ್ತ” ಎಂದರು.
 
ಮಂಡ್ಯ, ಕೋಲಾರದಲ್ಲಿ ರಾಹುಲ್ ಗಾಂಧಿ ಪ್ರಚಾರ
ರಾಹುಲ್ ಗಾಂಧಿ ಅವರ  ರಾಜ್ಯ ಭೇಟಿ ವಿಚಾರವಾಗಿ ಕೇಳಿದಾಗ, “ರಾಹುಲ್ ಗಾಂಧಿ ಅವರು ನಾಳೆ ಮಂಡ್ಯ ಹಾಗೂ ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಧ್ಯಾಹ್ನ ಮಂಡ್ಯಕ್ಕೆ ತೆರಳಿ, ನಂತರ ಕೋಲಾರಕ್ಕೆ ಹೋಗಿ ಅಲ್ಲಿಂದ ದೆಹಲಿಗೆ ಹೋಗುತ್ತಾರೆ. ಪ್ರಿಯಾಂಕಾ ಗಾಂಧಿ ಅವರು ಕೆಲವು ದಿನಾಂಕ ಕೊಟ್ಟಿದ್ದು ಅವರಿಗೆ ಬೇರೆ ರಾಜ್ಯಗಳಲ್ಲಿ ಪ್ರಚಾರದ ಒತ್ತಡವಿದೆ. ಅಅವರ ಕೊಟ್ಟಿರುವ ದಿನಾಂಕಗಳ ಸಮಯವನ್ನು ಹೊಂದಾಣಿಕೆ ಮಾಡುತ್ತಿದ್ದೇವೆ” ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಜೆಡಿಎಸ್