Select Your Language

Notifications

webdunia
webdunia
webdunia
webdunia

ಈ ಬಾರಿಯ ಗೌರಿ ಹಬ್ಬದಂದು ಗಂಗೆ ಬರ್ತಿದ್ದಾಳೆ: ಡಿಸಿಎಂ ಡಿ.ಕೆ. ಶಿವಕುಮಾರ್

DK Shivakumar

Krishnaveni K

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (15:22 IST)
ಬೆಂಗಳೂರು: ಈ ಬಾರಿಯ ಗೌರಿ ಹಬ್ಬದ ದಿನದಂದು ಗಂಗೆ ಮಾತೆಗೆ ಪೂಜೆ ಸಲ್ಲಿಸುತ್ತಿರುವುದು ಬಹಳ ವಿಶೇಷವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಂಗ್ರೆಸ್ ಕಚೇರಿಯ ಭಾರತ ಜೋಡೋ ಭವನದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

"ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ನಾಳೆ ಉದ್ಘಾಟನೆಯಾಗುತ್ತಿದೆ. ಇಲ್ಲಿಂದ 24 ಟಿಎಂಸಿ ನೀರನ್ನು ಎತ್ತಿ ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ಉದ್ದೇಶಕ್ಕೆ ಪೂರೈಸಲಾಗುತ್ತಿದೆ. ಡಿಪಿಆರ್ ಮಾಡಿದ ಎಂಜಿನಿಯರ್ ಗಳಿಂದ ತಂತ್ರಜ್ಞರು, ಯೋಜನೆಗಾಗಿ ಜಮೀನು ನೀಡಿದ ರೈತರು ಎಲ್ಲರ ಪಾತ್ರ ಪ್ರಮುಖವಾಗಿದೆ" ಎಂದು ತಿಳಿಸಿದರು.

"ಈ ಯೋಜನೆಗೆ ಬಳಸಲಾಗಿರುವ ಯಂತ್ರ, ನೀರೆತ್ತುವ ತಂತ್ರಜ್ಞಾನ ನೋಡಿದರೆ ಒಂದು ವಿಸ್ಮಯ. ಹೆಚ್ಚಿನ ಹಣ ಖರ್ಚು ಮಾಡಿ ಯೋಜನೆ ಮಾಡಲಾಗಿದ್ದು, ಅಂತರ್ಜಲ ಹೆಚ್ಚಳಕ್ಕೆ ಈ ಯೋಜನೆ ಸಹಕಾರಿಯಾಗಿದೆ" ಎಂದರು.

"ಈ ಯೋಜನೆಯಿಂದ ನೀರು ತರಲು ಸಾಧ್ಯವೇ ಇಲ್ಲ. ನೀರು ಬಂದರೆ ಮೀಸೆ ಬೊಳಿಸಿಕೊಳ್ಳುತ್ತೇನೆ ಎಂದೆಲ್ಲಾ ಕೆಲವರು ಟೀಕೆ ಮಾಡಿದ್ದರು. ಹೀಗಾಗಿ ನಾನು ಈ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿ ಮೊದಲ ಹಂತದ ಕಾಮಗಾರಿ ಮುಗಿಸಿ ನೀರನ್ನು ಎತ್ತಿದ್ದೇವೆ" ಎಂದು ತಿಳಿಸಿದರು.

"ಈ ಯೋಜನೆ ಮಾರ್ಗದಲ್ಲಿ ಕೆಲವು ಅರಣ್ಯ ಪ್ರದೇಶಗಳಲ್ಲಿ ಸಮಸ್ಯೆ ಇರುವ ಕಾರಣ ನೀರನ್ನು ವಾಣಿ ವಿಲಾಸ ಅಣೆಕಟ್ಟಿಗೆ ಹರಿಸಲಾಗುತ್ತಿದೆ. ಈ ಸಮಸ್ಯೆ ಬಗೆಹರಿದು ಕಾಮಗಾರಿ ಮುಗಿದರೆ ಈ ವರ್ಷದೊಳಗೆ ತುಮಕೂರಿನವರೆಗೆ ನೀರನ್ನು ತರಲಾಗುವುದು" ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಈ ಯೋಜನೆ ಉದ್ಘಾಟನೆ ಒಂದು ಹಬ್ಬವಾಗಿದೆ. ಗೌರಿ ಹಬ್ಬ ಪ್ರತಿ ವರ್ಷ ಬರುತ್ತದೆ. ಆದರೆ ನಾಳೆ ಗೌರಿ ಹಬ್ಬದ ದಿನ ಗಂಗೆ ಪೂಜೆ ಮಾಡುವುದು ಬಹಳ ವಿಶೇಷ. ಎಲ್ಲಾ ಪಕ್ಷದ ನಾಯಕರಿಗೆ, ಶಾಸಕರು, ರೈತ ಮುಖಂಡರು ಕಾರ್ಯಕ್ರಮಕ್ಕೆ ಬಂದು ಈ ಗಳಿಗೆಗೆ ಸಾಕ್ಷೀಯಾಗಬೇಕು ಎಂದು ಮನವಿ ಮಾಡುತ್ತೇನೆ" ಎಂದರು.

"ಈ ಕಾರ್ಯಕ್ರಮದ ಪೂರ್ವಭಾವಿ ತಯಾರಿ ಹಿನ್ನೆಲೆಯಲ್ಲಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ" ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಡಿಪಿಐ ಅಣತಿಯಂತೆ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪ