ಬೆಂಗಳೂರು: ಒಂದೆಡೆ ಬೆಂಗಳೂರಿನಲ್ಲಿ ಮಳೆಯಿಂದ ಇಡೀ ನಗರವೇ ಪ್ರವಾಹ ಸದೃಶವಾಗಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಪ್ರಿಯಾಂಕ ವಾದ್ರಾ ಸ್ವಾಗತಕ್ಕೆ ನಿಂತಿದ್ದು ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಭಾರೀ ಮಳೆಯಿಂದಾಗಿ ಕಟ್ಟಡವೊಂದು ಕುಸಿತು ಸಾವು, ನೋವು ಸಂಭವಿಸಿತ್ತು. ಬಹುತೇಕ ಕಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜನ ಸಂಕಷ್ಟದಲ್ಲಿರುವಾಗ ಜನರ ಕಷ್ಟ ಕೇಳಲು ಜನನಾಯಕರು ಮನೆ ಬಾಗಿಲಿಗೆ ಬರುತ್ತಾರೆಂಬ ನಿರೀಕ್ಷೆಯಲ್ಲಿದ್ದರು.
ಆದರೆ ಇದೇ ಸಂದರ್ಭದಲ್ಲಿ ವಯನಾಡಿನಲ್ಲಿ ಉಪಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರಿಯಾಂಕ ಗಾಂಧಿ ವಾದ್ರಾ, ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಮೈಸೂರಿಗೆ ಬಂದಿಳಿದಿದ್ದಾರೆ. ಇವರನ್ನು ಸ್ವಾಗತಿಸಲು ಸಿಎಂ, ಡಿಸಿಎಂ ಸೇರಿದಂತೆ ಇಡೀ ಕಾಂಗ್ರೆಸ್ ಸಚಿವ ಸಂಪುಟವೇ ಅಲ್ಲಿ ಹಾಜರಿತ್ತು.
ಇದು ನೆಟ್ಟಿಗರು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಜನ ಸಂಕಷ್ಟದಲ್ಲಿರುವಾಗ ನಿಮಗೆ ಪ್ರಿಯಾಂಕ ವಾದ್ರಾರನ್ನು ಸ್ವಾಗತಿಸುವುದೇ ಮುಖ್ಯವಾಯಿತೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯರನ್ನು ಜನರು ಪ್ರಶ್ನೆ ಮಾಡಿದ್ದಾರೆ.