ಬೆಂಗಳೂರು: ವಿವಾದಿತ ಮಾಜಿ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಅಖಾಡಕ್ಕಿಳಿದಿದ್ದಾರೆ. ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶೇವಗಾಂವ್ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಇವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಪಕ್ಷದಿಂದ ಅಹ್ಮದ್‌ನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ 13 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಗಮನ ಸೆಳೆದಿದ್ದರು.
ಇದೀಗ ದಿಲೀಪ್ ವಿಧಾನಸಭೆ ಚುನಾವಣೆಗೆ ಸಲ್ಲಿಸಿರುವ ಅಫಿಡಿವಿಟ್ ಕೂಡ ಚರ್ಚೆಗೆ ಗ್ರಾಸವಾಗಿದೆ. ದಿಲೀಪ್ ಅವರು ತಮ್ಮ ಪತ್ನಿ ಮನೋರಮಾ ಖೇಡ್ಕರ್ ಅವರಿಗೆ ವಿಚ್ಚೇದನ ನೀಡಿದ್ದಾರೆ ಎಂದು ಅಫಿಡಿವಿಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ಇವರ ಪುತ್ರಿ ಪೂಜಾ ಅವರು ಒಬಿಸಿ ಹಾಗೂ ಅಂಗವಿಕಲ ಕೋಟಾ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಅವರನ್ನು ಕೆಲಸದಿಂದ ವಜಾ ಮಾಡಿ ಸೆಪ್ಟೆಂಬರ್ 7 ರಂದು ಆದೇಶ ಮಾಡಿತ್ತು.<>