ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಮಾಡಿ ಆ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಜನರ ಕಿವಿಗೆ ಹೂ ಇಟ್ಟಿತಾ? ಅಂತಹದ್ದೊಂದು ಅನುಮಾನ ಬರಲು ಕಾರಣವಿದೆ.
ಮೊನ್ನೆಯಷ್ಟೇ ರಾಜ್ಯ ಸರ್ಕಾರ ನಂದಿನಿ ಹಾಲಿಗೆ ಪ್ರತೀ ಲೀಟರ್ ಗೆ 4 ರೂ. ನಂತೆ ಏರಿಕೆ ಮಾಡಿತ್ತು. ದರ ಏರಿಕೆ ಮಾಡಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಸಿಎಂ ಸಿದ್ದರಾಮಯ್ಯ ಆದಿಯಾಗಿ ಸಚಿವರುಗಳು ಈ ಹಣವನ್ನು ರೈತರಿಗೆ ನೀಡುತ್ತೇವೆ ಎಂದು ಸಮಜಾಯಿಷಿ ನೀಡಿದ್ದರು.
ಆದರೆ ಈಗ ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ ದರದಲ್ಲಿ 3.50 ರೂ. ಇಳಿಕೆ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ರೈತರಿಗೆ ಕೊಡ್ತೀವಿ ಎಂದು ಸರ್ಕಾರ ಜನರಿಗೆ ಮಂಕುಬೂದಿ ಎರಚಿದೆಯೇ ಎಂಬ ಅನುಮಾನ ಶುರುವಾಗಿದೆ.
ಹಾವೇರಿ ಹಾಲು ಒಕ್ಕೂಟ ಉತ್ಪಾದಕರಿಗೆ ನೀಡುತ್ತಿದ್ದ ದರದಲ್ಲಿ 3.50 ರೂ. ಇಳಿಕೆ ಮಾಡಿದೆ. ಹಾಲು ಉತ್ಪಾದಕರು, ಸಂಘಗಳಿಗೆ ನೀಡುತ್ತಿದ್ದ ಹಣದಲ್ಲಿ ಇಳಿಕೆ ಮಾಡಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಸಮರ್ಥನೆ ನೀಡಿರುವ ಹಾವೇರಿ ಹಾಲು ಒಕ್ಕೂಟ, ಸದ್ಯಕ್ಕೆ ಒಕ್ಕೂಟ 18 ಕೋಟಿ ರೂ. ನಷ್ಟದಲ್ಲಿದೆ. ಅದಕ್ಕೇ ದರ ಇಳಿಕೆ ಮಾಡಲಾಗಿದೆ ಎಂದಿದೆ. ಹಾಗಿದ್ದರೆ ನಂದಿನಿ ಹಾಲಿನ ದರ ಏರಿಕೆ ಮಾಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.