Publish Date: Fri, 16 May 2014 (08:08 IST)
Updated Date: Fri, 16 May 2014 (08:20 IST)
ಇಂದು 16 ನೇ ಲೋಕಸಭಾ ಚುನಾವಣೆಯ ಫಲಿತಾಂಶ. ಮುಂದಿನ ಐದು ವರ್ಷಗಳಲ್ಲಿ ಭವ್ಯ ಭಾರತವನ್ನು ನಿರ್ಮಾಣಕ್ಕಾಗಿ ಮತದಾರರು ನೀಡಿರುವ ತೀರ್ಪನ್ನು ಇಂದು ಪ್ರಕಟಿಸುವ ಸುದಿನ. ತಮ್ಮನ್ನೇ ಗೆಲ್ಲಿಸುವಂತೆ ಎಲ್ಲ ಅಭ್ಯರ್ಥಿಗಳೂ ಬೆಳಿಗ್ಗೆಯಿಂದಲೇ ದೇವರ ಮೊರೆ ಹೋಗುತ್ತಿರುವುದಂತೂ ಸತ್ಯ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿದ್ದರೆ. ಯಾವುದನ್ನೂ ತಲೆ ಕೆಡಿಸಿಕೊಳ್ಳದೇ ನಿರಾಳವಾಗಿ ನಿರುಮ್ಮಳವಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಏಕೈಕ ವ್ಯಕ್ತಿ ಎಚ್.ಡಿ.ದೇವೇಗೌಡರು!.
ಹೌದು, ತಮ್ಮ ಕೊನೆಯ ಲೋಕಸಭಾ ಚುನಾವಣೆಯನ್ನು ಎದುರಿಸಿರುವ ನಮ್ಮ ದೊಡ್ಡಗೌಡರು ಅರ್ಥಾತ್ ದೇವೇಗೌಡರು ಎಲ್ಲಿಯೂ ಮುಖ್ಯವಾಹಿನಿಯಲ್ಲಿ ತಮ್ಮ ಮುಖವನ್ನೇ ತೋರಿಸಿಲ್ಲ. ನಿಗೂಢ ರಾಜಕೀಯ ನಡೆಗಳಿಂದಲೇ ಹೆಸರುವಾಸಿಯಾದ ಜೆಡಿಎಸ್ ಧುರೀಣ, ಎಲ್ಲಾ ರಾಜಕೀಯ ಚುನಾವಣಾ ಫಲಿತಾಂಶಗಳನ್ನು ಈಗಾಗಲೇ ಲೆಕ್ಕಾಚಾರ ಮಾಡಿದ್ದಾರೆಂಬುದು ಹಲವರ ಆಂಬೋಣ. ಹಾಸನ ಲೋಕಸಭಾ ಚುನಾವಣೆಯಲ್ಲಿ ಕೊನೆಯದಾಗಿ ಸ್ಪರ್ಧಿಸಿರುವ ಅವರು ಲಕ್ಷಕ್ಕಿಂತಲೂ ಹೆಚ್ಚಿನ ಲೀಡ್‌ನಲ್ಲಿ ಗೆಲ್ಲುತ್ತಾರೆಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.
ಏನೇ ಆಗಲಿ, ಕರ್ನಾಟಕದಲ್ಲಿ ಜೆಡಿಎಸ್ ಗಳಿಸಲಿರುವ ಸ್ಥಾನಗಳು ಈಗಾಗಲೇ ನಿಕ್ಕಿಯಾಗಿವೆಯಾದರೂ, ನಿಖರ ಫಲಿತಾಂಶವನ್ನು ಕಾದುನೋಡಬೇಕಿದೆ.