Publish Date: Sat, 21 Oct 2017 (19:27 IST)
Updated Date: Sat, 21 Oct 2017 (19:33 IST)
ರಾಮನಗರ: ಪ್ರಜ್ವಲ್ ರೇವಣ್ಣ ಮಾಧ್ಯಮಗಳ ಎದುರು ಮಾತನಾಡುವುದನ್ನೇ ಕೆಲವರು ಮನರಂಜನೆ ಎಂದುಕೊಂಡಿದ್ದಾರೆ. ಆದರೆ ನಾನು ಮನರಂಜನೆಗೆ ಅವಕಾಶ ನೀಡುವುದಿಲ್ಲ. ನನಗೆ ಬೆಳೆಸುವುದೂ ಗೊತ್ತು. ತೀರಾ ಚೇಷ್ಠೆ ಮಾಡಿದರೆ ಹೊರಹಾಕುವುದೂ ಸಹ ಗೊತ್ತು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಮೊಮ್ಮಗನ ವಿರುದ್ಧ ಗುಡುಗಿದ್ದಾರೆ.
ಮ್ಯಾಗ್ನೋಲಿಯಾ ಕ್ಲಬ್‌ನಲ್ಲಿ ಮಾತನಾಡಿದ ಅವರು, ರೇವಣ್ಣನ ಮಗ ಪ್ರಜ್ವಲ್ ರಾಜಕೀಯದಲ್ಲಿ ಬೆಳೆಯುವುದು ನಿಶ್ಚಿತ. ಅದನ್ನು ತಪ್ಪಿಸೋಕೆ ಯಾರಿಂದಲೂ ಆಗುವುದಿಲ್ಲ. ಅವರ ಹಣೆಬರಹ ಏನಿದೆಯೋ ಅದನ್ನು ತಪ್ಪಿಸಲು ನಾವ್ಯಾರು ಎಂದರು.
ಹಲವು ಜನ ಯುವಕರಿದ್ದಾರೆ. ರೇವಣ್ಣನ ಮಗ ಒಬ್ಬನೇನಾ? ನಿಖಿಲ್ ಅವನ ತಂದೆಗೋಸ್ಕರ ದುಡಿಯುತ್ತೇನೆ ಅಂದಿಲ್ವಾ? ಅನೇಕ ಯುವಕರು ತಾಮುಂದು, ನಾಮುಂದು ಅಂತಾರೆ. ಎಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ. ನಮಗೆ 120 ಸ್ಥಾನ ದಾಟಬೇಕು ಎಂಬ ಹಠವಿದೆ. ಪಕ್ಷದಲ್ಲಿ ಪ್ರತಿಯೊಂದು ಸೀಟನ್ನು ಗೆಲ್ಲುವ ನಿಟ್ಟಿನಲ್ಲಿ ಲೆಕ್ಕಾಚಾರ ಮಾಡುತ್ತೇವೆ ಎಂದು ದೇವೇಗೌಡ ಹೇಳಿದರು.
ಚನ್ನಪಟ್ಟಣದಲ್ಲಿ ಯಾರಿಗೂ ಅಷ್ಟು ಸುಲಭವಾಗಿ ಟಿಕೆಟ್ ನೀಡುವುದಿಲ್ಲ. ಕೆಲವರು ಯಾವ ಮಟ್ಟಕ್ಕೆ ಮಾತನಾಡುತ್ತಾರೆ ಅಂದರೆ ಅರ್ಜಿ ಹಾಕಿದ್ರೆ ಕರೆದುಕೊಂಡು ಬಂದು ನಿಲ್ಲಿಸುತ್ತೇವೆ ಅಂತಾರೆ. ಈ ಬಗ್ಗೆ ಎಕ್ಸಸೈಜ್ ಮಾಡಬೇಡಿ, ಅದರ ಅವಶ್ಯಕತೆ ಇಲ್ಲ. ಬೇರೆ ಯಾರಾದರೂ ಚನ್ನಪಟ್ಟಣದಲ್ಲಿ ಗುರ್ತಿಸಿಕೊಳ್ಳಬೇಕು ಅಂತ ಹೇಳಿದ್ದೇವೆ ಎಂದು ಜೆಡಿಎಸ್ ವರಿಷ್ಠರು ತಿಳಿಸಿದರು.