ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಮತ್ತು ಉಡುಪಿಯಲ್ಲಿ ಈಗ ಹೊರಗೆ ಕಾಲಿಡಲಾಗದಷ್ಟು ಬಿಸಿಲು, ಸೆಖೆ ಶುರುವಾಗಿದೆ. ಜನ ಯಾವ ನಮೂನೆ ಸೆಖೆ ಮಾರಾಯ್ರೇ ಎಂದು ಬೆವರಿಳಿಸುವಂತಾಗಿದೆ.
ನಿನ್ನೆ ದಕ್ಷಿಣ ಕನ್ನಡದ ತಾಪಮಾನ ಬರೋಬ್ಬರಿ 40 ಡಿಗ್ರಿಯ ಆಸುಪಾಸು ತಲುಪಿತ್ತು. ಕೇರಳದಲ್ಲಿ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ತುಂತುರು ಮಳೆಯಿತ್ತು. ಗಡಿ ಜಿಲ್ಲೆಯಲ್ಲಿ ಭಾರೀ ಬಿಸಿಲು, ಸೆಖೆ ಕಂಡುಬಂದಿದೆ.
ಈ ಬಾರಿ ಕರಾವಳಿ ಭಾಗದಲ್ಲಿ ದಾಖಲೆಯ ತಾಪಮಾನ ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ನಿನ್ನೆಯಂತೂ ವಿಪರೀತ ಸೆಖೆಯಿತ್ತು. ಇಂದೂ ಅದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಇಂದೂ ಕೂಡಾ ಕೆಲವೆಡೆ ಕೊಂಚ ಮೋಡ ಕವಿದ ವಾತಾವರಣ ಮತ್ತು ಬಹುತೇಕ ಬಿಸಿಲು ಕಂಡುಬರಲಿದೆ. ಇಂದೂ ಕೂಡಾ ಗರಿಷ್ಠ ತಾಪಮಾನ 40 ಡಿಗ್ರಿ ಆಸುಪಾಸು ಬಂದು ತಲುಪಲಿದೆ. ಈ ವಾರಕ್ಕಂತೂ ದಕ್ಷಿಣ ಕನ್ನಡದಲ್ಲಿ ಮಳೆಯ ಸೂಚನೆಯಿಲ್ಲ. ಬದಲಾಗಿ ಉಷ್ಣ ಅಲೆಯ ಅಪಾಯವಿದೆ. ಹೀಗಾಗಿ ಮುಂದಿನ ಕೆಲವು ದಿನಗಳಿಗೆ ಜನ ಬೆವರಿಳಿಸಲೇಬೇಕಾಗಿದೆ.