ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರನ್ನು ಸೋಲಿಸಿದ್ದು ಯಾರದ್ದೋ ಜಿದ್ದಲ್ಲ ಅಥವಾ ಜೆಡಿಎಸ್-ಬಿಜೆಪಿ ಮೈತ್ರಿಯೂ ಅಲ್ಲ. ಜನ ಅವರನ್ನು ಸೋಲಿಸಿದ್ದಾರೆ, ಕೆಲಸಗಾರನನ್ನು ಸೋಲಿಸಿರುವುದು ವೇದನೆಯನ್ನುಂಟು ಮಾಡಿದೆ ಎಂದು ಸಚಿವ ಜಮೀರ್ ಅಹಮ್ಮದ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಡಿ.ಕೆ. ಸುರೇಶ್ ಅವರು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಎದುರು 2.60 ಲಕ್ಷಕ್ಕೂ ಹೆಚ್ಚಿನ ಅಂತರದಲ್ಲಿ ಸೋಲು ಕಂಡಿದ್ದು, ಇದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.
ಸೋಲಿನ ಹತಾಶೆಯಲ್ಲಿರುವ ಡಿ.ಕೆ. ಸುರೇಶ್ರನ್ನು ಸಂತೈಸಲು ಕಾಂಗ್ರೆಸ್ ನಾಯಕರ ದಂಡೇ ಅವರ ಮನೆಗೆ ದೌಡಾಯಿಸುತ್ತಿದೆ. ಸೋಲಿನ ಪರಮಾರ್ಶೆ ಮಾಡುತ್ತಿದ್ದಾರೆ. ಡಿ.ಕೆ. ಸುರೇಶ್ರನ್ನು ಭೇಟಿ ಮಾಡಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಸೋಲಿನ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.
ಸುರೇಶ್ ಅವರ ಸೋಲು ಅಘಾತಕಾರಿಯಾಗಿದ್ದು, ಬಹಳ ನೋವುಂಟು ಮಾಡಿದೆ. ದೇಶದ ಅಲ್ಲಾ ಸಂಸದರ ಪೈಕಿ ಅತಿ ಹೆಚ್ಚು ಕೆಲಸ ಮಾಡಿದವರು ಡಿ.ಕೆ. ಸುರೇಶ್. ನಾನು ನೋಡಿದಂರತೆ ಪ್ರತಿದಿನ ತಮ್ಮ ಕ್ಷೇತ್ರದ ಕೆಲಸ ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಅವರ ಸೋಲು ನಿರೀಕ್ಷೆ ಮಾಡಿರಲಿಲ್ಲ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ಕಳೆದ ಬಾರಿ ಕೇವಲ ಒಂದು ಸೀಟು ಸಿಕ್ಕಿತ್ತು, ಈ ಬಾರಿ ಒಂಬತ್ತು ಸ್ಥಾನಗಳು ಲಭಿಸಿವೆ. ಉಳಿದ ಕ್ಷೇತ್ರಗಳ ಸೋಲಿನ ಬಗ್ಗೆ ಪರಮಾರ್ಶಿಸಲಾಗುವುದು ಎಂದು ಜಮೀರ್ ಹೇಳಿದರು<>