Select Your Language

Notifications

webdunia
webdunia
webdunia
webdunia

ಪ್ರಮಾಣಿಕರಾಗಿದ್ರೆ ಸಿಬಿಐ ತನಿಖೆಗೆ ಭಯ ಯಾಕ್ರೀ ಸಿದ್ದರಾಮಯ್ಯ: ಸಿಟಿ ರವಿ ಟಾಂಗ್

CT Ravi

Krishnaveni K

ಬೆಂಗಳೂರು , ಶುಕ್ರವಾರ, 27 ಸೆಪ್ಟಂಬರ್ 2024 (16:33 IST)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾರ್ವಜನಿಕ ಜೀವನ ಪರಿಶುದ್ಧವಲ್ಲ; ತನ್ನ ಭ್ರಷ್ಟಾಚಾರ ಗೊತ್ತಾಗಬಾರದೆಂದು, ಹೊರಗೆ ಬರಬಾರದು ಎಂಬ ಕಾರಣಕ್ಕಾಗಿಯೇ ಪೂರ್ವತಯಾರಿ ಮಾಡಿಕೊಂಡು ಭ್ರಷ್ಟಾಚಾರ ಮಾಡುವ ಅವರು ಒಬ್ಬ ಕ್ರಿಮಿನಲ್ ಕರಪ್ಟ್ ಪಾಲಿಟಿಶಿಯನ್ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದರು.

ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ವಿರುದ್ಧ 65ಕ್ಕೂ ಪ್ರಕರಣಗಳ ದೂರು ಸಲ್ಲಿಕೆಯಾಗಿವೆ. ಆ ದೂರುಗಳ ಸತ್ಯಾಸತ್ಯತೆ ಹೊರಕ್ಕೆ ಬರಬಾರದು ಎಂದು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಿಕೊಂಡು 15ಕ್ಕೂ ಹೆಚ್ಚು ಪ್ರಕರಣಗಳಿಗೆ ತನ್ನ ಅಧೀನದ ಎಸಿಬಿಯಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ ಎಂದು ದೂರಿದರು. 50ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯೇ ಆಗಿಲ್ಲ ಎಂದು ತಿಳಿಸಿದರು.

ತನಿಖೆಯೇ ಆಗದಂತೆ ಮುನ್ನೆಚ್ಚರಿಕೆ ವಹಿಸಿ ನಾನು ಪ್ರಾಮಾಣಿಕ ಎಂದು ಅವರಿಗೆ ಅವರೇ ಹೇಳಿಕೊಳ್ಳುತ್ತಿದ್ದಾರೆ. ಈಗ ಸಿಬಿಐಗೆ ಇದ್ದ ಮುಕ್ತ ತನಿಖೆಯ ಅಧಿಕಾರವನ್ನು ನಿನ್ನೆಯ ಸಂಪುಟ ಸಭೆ ಮೊಟಕು ಮಾಡಿದೆ. ನೀವು ಪ್ರಾಮಾಣಿಕರಿದ್ದರೆ ನಿಮಗೆ ಸಿಬಿಐ ತನಿಖೆ ಮಾಡಿದರೆ ಭಯ ಏಕೆ? ನೀವು ಮತ್ತು ನಿಮ್ಮ ಸರಕಾರ ಪರಮಭ್ರಷ್ಟ ಸರಕಾರ ಎಂಬುದನ್ನು ನಿಮ್ಮ ನಿಲುವೇ ತೋರಿಸುತ್ತದೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಮುಖವಾಡ ಹೊರಬೀಳುವ ಭಯದಿಂದ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಮಾಡಿದ್ದಾರೆ. ಇದು ಸಂವಿಧಾನವಿರೋಧಿ ಮತ್ತು ಭ್ರಷ್ಟರು ಮಾತ್ರ ಮಾಡುವ ಕೆಲಸ ಎಂದು ಆಕ್ಷೇಪಿಸಿದರು. ಮಾನ್ಯ ರಾಜ್ಯಪಾಲರ ಪತ್ರಕ್ಕೆ ಕೇವಲ ಸಂಪುಟದ ನಿರ್ಣಯದ ಮೂಲಕ ಮಾತ್ರ ಉತ್ತರಿಸಬೇಕೆಂಬ ತೀರ್ಮಾನ ಹಾಸ್ಯಾಸ್ಪದ ಎಂದು ಅವರು ವಿಶ್ಲೇಷಿಸಿದರು.

ಮೊಹಬ್ಬತ್ ಕೆ ದುಕಾನ್ ಎಂದು ಹೇಳುತ್ತಲೇ ಪಾದಯಾತ್ರೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಮೊಹಬ್ಬತ್ ಕೆ ದುಕಾನ್ ಇಲ್ಲ; ಭ್ರಷ್ಟಾಚಾರದ ಶಾಪಿಂಗ್ ಮಾಲ್ ತೆರೆದಿದ್ದಾರೆ ಎಂದು ಟೀಕಿಸಿದರು. ಭ್ರಷ್ಟಾಚಾರದ ಆರೋಪ ಬಂದಾಗ ತನಿಖೆಗೆ ಧೈರ್ಯ ತೋರಿಸುತ್ತಿಲ್ಲ ಎಂದು ಆಕ್ಷೇಪಿಸಿದರು.
 
ಸಚಿವ ಸಂಪುಟದಿಂದ ಜಮೀರ್ ವಜಾ ಮಾಡಿ
ಹೈಕೋರ್ಟ್ ತೀರ್ಪನ್ನು ಜಮೀರ್ ಅಹ್ಮದ್ ಅವರು ರಾಜಕೀಯ ತೀರ್ಪು ಎಂದಿದ್ದಾರೆ.
ನ್ಯಾಯಾಲಯವನ್ನೂ ಅಪನಂಬಿಕೆಯಿಂದ ನೋಡುವುದು ಕಾಂಗ್ರೆಸ್ಸಿಗೆ ಹೊಸದೇನೂ ಅಲ್ಲ. ಸಂವಿಧಾನ ಗೌರವಿಸುವವರು ಆಡುವ ಮಾತು, ನಡವಳಿಕೆ ಇದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಮೀರ್ ಅಹ್ಮದ್ ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ಕೊಟ್ಟರು ಎಂದು ಪ್ರಶ್ನಿಸಿದ ಸಿ.ಟಿ.ರವಿ ಅವರು, ಜಮೀರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿದರು.
 
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಕಾಂಗ್ರೆಸ್ ಪಕ್ಷವು ಭಯಭೀತ ಸ್ಥಿತಿಯಲ್ಲಿದೆ. ತಮ್ಮ ಬಂಡವಾಳ, ಭ್ರಷ್ಟಾಚಾರ ಹೊರಕ್ಕೆ ಬರಬಾರದು ಎಂಬ ಕಾರಣಕ್ಕೋಸ್ಕರವೇ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನ್ಯಾಯಾಲಯದ ಆದೇಶಗಳು ಇವರ ಸಾರ್ವಜನಿಕ ಕ್ಷೇತ್ರದ ಬಿಳಿ ಬಟ್ಟೆ ಮೇಲಿನ ಕಳಂಕ ಆಡಳಿತ, ಭ್ರಷ್ಟಾಚಾರವನ್ನು ಬಯಲು ಮಾಡಿವೆ. ಮಾನ್ಯ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟ ಕಾರಣಕ್ಕೆ ಅವರ ವಿರುದ್ಧ ಹೀನಾಯವಾಗಿ ಟೀಕೆ ಮಾಡಿದರು. ಚಳವಳಿ ಮಾಡಿದ್ದರು; ಕೆಲವರು ಬಾಂಗ್ಲಾ ಮಾದರಿ ಹೋರಾಟ ಆಗುತ್ತದೆ ಎಂದು ಎಚ್ಚರಿಸಿದ್ದರು ಎಂದು ಗಮನ ಸೆಳೆದರು. ಸಂವಿಧಾನ- ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ವರ್ತನೆ ಇತ್ತು. ನಾವು ಕಾನೂನಿಗಿಂತ ಮೇಲು ಎಂಬ ಅಹಂಕಾರದ ಭಾವನೆ ಇತ್ತು ಎಂದು ವಿಶ್ಲೇಷಿಸಿದರು.
 
ಹೈಕೋರ್ಟ್ ನ್ಯಾಯಾಧೀಶರು ಗೌರವಾನ್ವಿತ ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದು ಕಾನೂನಿನ ದೃಷ್ಟಿಯಲ್ಲಿ ಸಿದ್ದರಾಮಯ್ಯನವರು ಸೇರಿ ಎಲ್ಲರೂ ಸಮಾನರು ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಕಾಂಗ್ರೆಸ್ಸಿಗರು ರಾಜ್ಯಪಾಲರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮೇಲೆ ಎಫ್‌ಐಆರ್ ದಾಖಲಾಯಿತು ಮುಂದೇನು ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ