Publish Date: Mon, 29 Jul 2024 (15:06 IST)
Updated Date: Mon, 29 Jul 2024 (15:09 IST)
ಬೆಂಗಳೂರು: ಜನರಿಗೆ ಸತ್ಯವನ್ನು ಹೇಳುವುದೇ ಪಾದಯಾತ್ರೆಯ ಉದ್ದೇಶ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದರು.
ನಗರದಲ್ಲಿ ಇಂದು ನಡೆದ ಮೈಸೂರು ಪಾದಯಾತ್ರೆಯ ಪೂರ್ವ ತಯಾರಿ ಸಭೆಯ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಅವರಿಗೆ ಸತ್ಯದ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರುವರೆಗೆ ಎನ್‍ಡಿಎ ವತಿಯಿಂದ ಪಾದಯಾತ್ರೆ ಮಾಡುತ್ತೇವೆ ಎಂದು ವಿವರ ನೀಡಿದರು.
ವಿವಿಧ ಹಗರಣಗಳ ಕುರಿತು ಸರಕಾರವು ನಮಗೆ ವಿಧಾನಮಂಡಲದಲ್ಲಿ ಚರ್ಚೆ ನಡೆಸಲು ಅವಕಾಶ ಕೊಟ್ಟಿಲ್ಲ. ಸರಕಾರಕ್ಕೆ ಸತ್ಯವನ್ನು ಎದುರಿಸುವ ಧಮ್ ಇದ್ದಿದ್ದರೆ ಅವರು ವಿಧಾನಮಂಡಲದಲ್ಲಿ ಚರ್ಚೆಗೆ ಅವಕಾಶ ಕೊಡುತ್ತಿದ್ದರು ಎಂದು ವಿಶ್ಲೇಷಿಸಿದರು.
ಮೂಡ ಹಗರಣ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಸೇರಿ ಎಲ್ಲ ಅವ್ಯವಹಾರಗಳನ್ನು ಜನರಿಗೆ ತಿಳಿಸುತ್ತೇವೆ ಎಂದ ಅವರು, ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯುವ ಉದ್ದೇಶದಿಂದ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.