Select Your Language

Notifications

webdunia
webdunia
webdunia
webdunia

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ: ಸಚಿವ ನಾಗೇಂದ್ರ ವಜಾಗೆ ಸಿ.ಟಿ ರವಿ ಆಗ್ರಹ

CT Ravi

Krishnaveni K

ಬೆಂಗಳೂರು , ಮಂಗಳವಾರ, 28 ಮೇ 2024 (15:54 IST)
ಬೆಂಗಳೂರು: ಶಿವಮೊಗ್ಗದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ಕಾರಣರಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ನಾಗೇಂದ್ರ ಅವರನ್ನು ತಕ್ಷಣವೇ ವಜಾ ಮಾಡಿ, ಬಂಧಿಸಿ ತನಿಖೆ ನಡೆಸುವಂತೆ ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆಗ್ರಹಿಸಿದರು.

ಮಸ್ಕಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಬರೆದಿಟ್ಟ ಡೆತ್ ನೋಟ್‍ನಲ್ಲಿ, ಪರಿಶಿಷ್ಟ ಪಂಗಡದ ಬಡವರಿಗೆ ಸೇರಬೇಕಾದ 187 ಕೋಟಿ ರೂ.ಗಳನ್ನು ಸಚಿವರ ಸೂಚನೆ ಮೇರೆಗೆ ನಕಲಿ ಖಾತೆಗಳಿಗೆ ವರ್ಗಾಯಿಸಿ ಅವ್ಯವಹಾರ ನಡೆಸಲಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ನಿಗಮದ ಆಡಳಿತ ನಿರ್ದೇಶಕ ಹಾಗೂ ಅಧಿಕಾರಿಗಳು ನಕಲಿ ಖಾತೆಗಳನ್ನು ತೆರೆದು ಈ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಎಲ್ಲರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯ ಬೇರೆ ಅಗತ್ಯವಿಲ್ಲ. ಅಂದು ಬಿಜೆಪಿ ಸರಕಾರವಿದ್ದಾಗ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆಗಿನ ವಿಪಕ್ಷ ನಾಯಕ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಿನ ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪನವರ ವಜಾಕ್ಕೆ ಆಗ್ರಹಿಸಿದ್ದರು. ಕಾನೂನು, ಸಂವಿಧಾನ ಎಂದೆಲ್ಲ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತ ಭಾರೀ ಗದ್ದಲವೆಬ್ಬಿಸಿದ್ದರು. ಈಗ ಅವರದೇ ಸರಕಾರವಿದೆ. ಅದೇ ಮಾತುಗಳನ್ನು ಈಗ ಹೇಳಲಿ ನೋಡೋಣ ಎಂದು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಮತ್ತು ಇಲಾಖೆಯ ಆಪಾದಿತ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ಹಾಗೂ ಎಸ್‍ಸಿ, ಎಸ್‍ಟಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
 
ಬರೀ ಲೂಟಿಯಲ್ಲ, ಹಗಲು ದರೋಡೆ..
ಈ ಸರಕಾರದಲ್ಲಿ ನಡೆಯುತ್ತಿರುವುದು ಬರೀ ಲೂಟಿಯಲ್ಲ, ಹಗಲು ದರೋಡೆ. ಅಧಿಕಾರಿ ಚಂದ್ರಶೇಖರ್ ಸಾವಿಗೆ ಸಚಿವರೇ ನೇರ ಕಾರಣವಾಗಿದ್ದು, ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಿಂದ ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಸಿ.ಟಿ ರವಿ ಅವರು ಹೇಳಿದರು.
 
ಪರಿಷತ್ ಚುನಾವಣೆಯಲ್ಲಿ ಆರೂ ಸ್ಥಾನಗಳು ಎನ್‍ಡಿಎಗೆ:
ವಿಧಾನ ಪರಿಷತ್‍ನ ಮೂರು ಪದವೀಧರ ಕ್ಷೇತ್ರಗಳು ಮತ್ತು ಮೂರು ಶಿಕ್ಷಕಕರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಎಲ್ಲ ಆರೂ ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದು ಪ್ರತಿಪಾದಿಸಿದರು.

ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲದೊಂದಿಗೆ ಮೈತ್ರಿಪಕ್ಷ ಜಾತ್ಯತೀತ ಜನತಾ ದಳದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಈ ಭಾಗದಲ್ಲಿ ನಮ್ಮ ಅಭ್ಯರ್ಥಿ ಅಮರನಾಥ ಪಾಟೀಲ್ ಸ್ಪರ್ಧಿಸಿದ್ದಾರೆ. ಈ ಹಿಂದೆ ಅವರು ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿ ಉತ್ತಮ ಕೆಲಸ ಮಾಡಿದ್ದಾರೆ.  ಈ ಬಾರಿಯೂ ನಮ್ಮೆಲ್ಲ ಪ್ರಜ್ಞಾವಂತ ಮತದಾರ ಬಾಂಧವರು ಅವರನ್ನು ಬೆಂಬಲಿಸಿ ಗೆಲ್ಲಿಸಿ ವಿಧಾನ ಪರಿಷತ್‍ಗೆ ಆಯ್ಕೆ ಮಾಡಬೇಕೆಂದು ಮನವಿ ಮಾಡುತ್ತೇನೆ ಎಂದು ಸಿ.ಟಿ ರವಿ ಹೇಳಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಪಿತಾಮಹರು: ಬಿವೈ ವಿಜಯೇಂದ್ರ