Select Your Language

Notifications

webdunia
webdunia
webdunia
webdunia

ಹಾಲು ಕೊಟ್ಟವಳನ್ನು ರಕ್ತಕೊಟ್ಟಾದರೂ ಉಳಿಸಿಕೊಳ್ಳಬೇಕು : ರಾಘವೇಶ್ವರಶ್ರೀ

ಹಾಲು ಕೊಟ್ಟವಳನ್ನು ರಕ್ತಕೊಟ್ಟಾದರೂ ಉಳಿಸಿಕೊಳ್ಳಬೇಕು : ರಾಘವೇಶ್ವರಶ್ರೀ
ಬೆಂಗಳೂರು , ಶುಕ್ರವಾರ, 29 ಜುಲೈ 2016 (20:08 IST)
ಗೋ ಆಧಾರಿತ ಕೃಷಿಗೆ ಮನ್ನಣೆ ನೀಡಿ, ರಾಸಾಯನಿಕ ಗೊಬ್ಬರಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಕಡಿತಗೊಳಿಸಿದರೆ, ಗೋರಕ್ಷಣೆ ಹಾಗೂ ರೈತರ ರಕ್ಷಣೆ ಸಾಧ್ಯ. ಜೀವನ ಪರ್ಯಂತ ಅಮೃತಮಯವಾದ ಹಾಲನ್ನು ಕೊಡುವ ಗೋಮಾತೆಯನ್ನು ರಕ್ತಕೊಟ್ಟಾದರೂ ಉಳಿಸಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಇಂದು ರಾಸಾಯನಿಕ ಕೃಷಿಗೆ ಪ್ರೋತ್ಸಾಹ ಕೊಡುತ್ತಿರುವುದರಿಂದ ಗೋವುಗಳ ಮಾರಣಹೋಮ ನಡೆಯುತ್ತಿದೆ, ಭೂಮಿ ಬಂಜರಾಗಿದೆ, ಜನ ವಿಷಯುಕ್ತ ಆಹಾರವನ್ನು ಸೇವಿಸುವಂತಾಗಿದೆ ಎಂದ ಶ್ರೀಗಳು, ಗೋಆಧಾರಿತವಾದ ಕೃಷಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
 
 ಕಣ್ವಮಠದ ಶ್ರೀ ವಿದ್ಯಾವಾರಿಧಿ ತೀರ್ಥ ಶ್ರೀಪಾದಂಗಳವರು ಸಂತಸಂದೇಶ ನೀಡಿ, ಎಲ್ಲರಿಗೂ ಮಾತೆ ಗೋಮಾತೆ, ಗೋವು ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಹಾಲನ್ನು ನೀಡುತ್ತದೆ. ಹಾಗೆಯೇ ನಾವು ನಮ್ಮಲ್ಲಿರುವ ತಾರತಮ್ಯವನ್ನು ಮರೆತು ಗೋರಕ್ಷಣೆಗೆ ಮುಂದಾಗಬೇಕು. ಶ್ರೀರಾಮಚಂದ್ರಾಪುರಮಠದ ಗೋ ಆಂದೋಲನಕ್ಕೆ ಕಣ್ವಮಠದ ಸಹಕಾರ ಎಂದೂ ಇದೆ ಎಂದು ತಮ್ಮ ಸಹಕಾರವನ್ನು ತಿಳಿಸಿದರು.
 
2005 ರಿಂದ ಗೋರಕ್ಷಣೆಯಲ್ಲಿ ತೊಡಗಿಕೊಂಡು, ಅಕ್ರಮವಾಗಿ ಸಾಗಾಣೆಯಾಗುತ್ತಿದ್ದ 5000 ಹೆಚ್ಚು ಗೋವುಗಳನ್ನು ಸಂರಕ್ಷಿಸಿರುವ, ಅರಸೀಕೆರೆಯ ಭಾರತೀಯ ಗೋಪರಿವಾರದ ಟ್ರಸ್ಟ್ ಹಾಗು 1.20ಲಕ್ಷಕ್ಕೂ ಅಧಿಕ ರೋಗಿಗಳಿಗೆ ಗೋಆಧಾರಿತ ಚಿಕಿತ್ಸೆಯನ್ನು ನೀಡಿರುವ ಪಾರಂಪರಿಕ ವೈದ್ಯರಾದ ಡಾ.ಹನುಮಂತ ಮಳಲಿ ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದರು. 
 
ಗೋಸೇವಾಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಡಾ.ಹನುಮಂತ ಮಳಲಿ ಅವರು,ವಿದೇಶಿ ತಳಿಯ ಹಾಲು ದೈಹಿಕ ಶಕ್ತಿಯನ್ನು ಮಾತ್ರ ನೀಡುತ್ತದೆ, ಆದರೆ ದೇಶಿ ಗೋವಿನ ಹಾಲಿನ ಬಳಕೆಯಿಂದ ಬೌದ್ಧಿಕ ಶಕ್ತಿಯೂ ಬೆಳವಣಿಗೆಯಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಹಾಲಿನಲ್ಲಿ 67% ರಾಸಾಯನಿಕ ಇರುವುದು ಆತಂಕಕಾರಿಯಾಗಿದ್ದು, ಇದರ ಬಳಕೆ ಅನೇಕ ರೋಗಗಳಿಗೆ ಮೂಲವಾಗಿದೆ. ಆದರೆ ಗೋಮೂತ್ರದಿಂದ ಕ್ಯಾನ್ಸರ್ ನಂತಹ ರೋಗವನ್ನೂ ಗುಣಪಡಿಸಬಹುದು ಎಂದು ಅಭಿಪ್ರಾಯಪಟ್ಟರು.
 
ಶ್ರೀಭಾರತೀಪ್ರಕಾಶನವು ಹೊರತಂದ ವನಜೀವನ ಯಜ್ಞ ಎಂಬ ಪುಸ್ತಕವನ್ನು ರಾಘವೇಶ್ವರಶ್ರೀಗಳು ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಕಣ್ವಮಠದ ಶ್ರೀಗಳು ಲೋಕಾರ್ಪಣೆ ಮಾಡಿದರು. ವನಜೀವನ ಯಜ್ಞ ಪುಸ್ತಕದ ಕರ್ತೃಗಳಾದ ನರೇಂದ್ರ ಹೊಂಡಗಾಶಿ ಅವರನ್ನು ಶ್ರೀಗಳು ಆಶೀರ್ವದಿಸಿದರು.
 
ಬಿದ್ರಕಾನ, ಚಪ್ಪರಮನೆ ಹಾಗೂ ದೊಡ್ಡಮನೆ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ನಿವೃತ್ತ ಸಾರಿಗೆ ಅಧಿಕಾರಿಗಳಾದ ಭೀಮಸೇನ್ ಗುಡಿ, ಭಾರತೀಯ ಗೋಪರಿವಾರದ ಟ್ರಸ್ಟಿನ ಸದಸ್ಯರು,  ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಅರವಿಂದ ಬಂಗಲಗಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
ಇಂದಿನ ಕಾರ್ಯಕ್ರಮ (30.07.2016):
 
ಬೆಳಗ್ಗೆ 7.00 ಕಾಮಧೇನು ಹವನ, ವೇದ ಪಾರಾಯಣ, ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಏಕಾದಶೀ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಾದಾಯಿ ವಿವಾದದಲ್ಲಿ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲಿ: ರಾಮಲಿಂಗಾರೆಡ್ಡಿ