ಮಾಜಿ ದೇವದಾಸಿ ಮಹಿಳೆಯರಲ್ಲಿ ಕೊರೋನಾ ವೈರಸ್ (ಕೊವೀಡ್-19) ಕುರಿತು ಜಾಗೃತಿ ಮೂಡಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಮಾಪೂರತಾಯಿ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೇಂಗಳಿ ಭೇಟಿ ನೀಡಿ, ಮಾಜಿ ದೇವದಾಸಿ ಮಹಿಳೆಯರಲ್ಲಿ ಕೊರೋನಾ ವೈರಸ್ (ಕೊವೀಡ್-19) ಕುರಿತು ಜಾಗೃತಿ ಮೂಡಿಸಿದರು.
ಚಿಂಚನಸೂರ ಗ್ರಾಮದ ಮಾಜಿ ದೇವದಾಸಿ ಮಹಿಳೆಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆಯ ಬಗ್ಗೆ ತಿಳಿ ಹೇಳಿದರು. ಈ ಕೊರೋನಾ ವೈರಸ್ ವಿರುದ್ಧ ನಾವು ಜಯ ಸಾಧಿಸಬೇಕಾದರೆ ಸುರಕ್ಷಿತವಾಗಿ ಮನೆಯಲ್ಲೇ ಇರಬೇಕು ಎಂದರು.
ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್‍ನ್ನು ಧರಿಸಬೇಕು. ಪದೇ ಪದೇ ಕೈಗಳನ್ನು ತೊಳೆದುಕೊಳ್ಳಬೇಕು. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಚಿಕ್ಕ ಮಕ್ಕಳು ಮತ್ತು ವಯೋವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಪ್ರಯುಕ್ತ ಅವರಲ್ಲಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಇದರ ಹಿನ್ನೆಲೆಯಲ್ಲಿ ಅವರು ಹೆಚ್ಚಾಗಿ ಮನೆಯಿಂದ ಹೊರಗೆ ಹೋಗಬಾರದು ಎಂದರು.