ಸಂತೋಷ್ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ ನೇರ ಕಾರಣ. ಅವರನ್ನು ಕೂಡಲೇ ಬಂಧಿಸಬೇಕು. ಅಲ್ಲಿಯವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಸಹೋದರ ಪ್ರಶಾಂತ್ ಪಾಟೀಲ್ ಹೇಳಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನ ಸಹೋದರ 4 ಕೋಟಿ ರೂ.ಕೆಲಸ ಮಾಡಿದ್ದ. ಇಲ್ಲಿಯವರೆಗೂ ಒಂದು ರೂಪಾಯಿಯೂ ಬಂದಿಲ್ಲ. ಸಂತೋಷ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಈಶ್ವರಪ್ಪ 40% ಕಮಿಷನ್ ಕೇಳಿದ್ದಾರೆ. ಜೀವ ಬೇದರಿಕೆ ಸಹ ಹಾಕಿದ್ದರು. ತಮ್ಮನ ಸಾವಿಗೆ ನ್ಯಾಯ ಸಿಗಲೇಬೇಕು.ಬೆಳಗಾವಿಯ ಸಮರ್ಥ ಕಾಲೋನಿಯಲ್ಲಿ ಸಂತೋಷ್ ಇರುತ್ತಿದ್ದ. ಸಚಿವ ಈಶ್ವರಪ್ಪ ಅವರನ್ನು ಅನೇಕ ಸಲ ಭೇಟಿಯಾಗಿದ್ದ. ಈಶ್ವರಪ್ಪ ಅರೆಸ್ಟ್ ಆಗುವವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದರು.. ಇನ್ನು ಈ ಸಂಬಂಧ ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದಾರೆ.ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಈಶ್ವರಪ್ಪನವರು ನೇರ ಕಾರಣ, ಹೀಗಾಗಿ ಅವರ ವಿರುದ್ಧ ಹತ್ಯೆ ಕೇಸು ದಾಖಲಿಸಿ, ಬಂಧಿಸಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ವಿಷಯ ಹೊರಬರುತ್ತಿದ್ದಂತೆ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಈಶ್ವರಪ್ಪನವರು ರಾಜೀನಾಮೆ ನೀಡಬೇಕು, ಸಿಎಂ ಬೊಮ್ಮಾಯಿ ಅವರು ಸಂಪುಟದಿಂದ ವಜಾ ಮಾಡಬೇಕು, ಇಲ್ಲದಿದ್ದರೆ ಮುಖ್ಯಮಂತ್ರಿಗಳ ನಿವಾಸಕ್ಕೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.