Select Your Language

Notifications

webdunia
webdunia
webdunia
webdunia

1 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗ್ರಾಹಕ ಕೋರ್ಟ್ ಆದೇಶ

1 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗ್ರಾಹಕ ಕೋರ್ಟ್ ಆದೇಶ
bangalore , ಸೋಮವಾರ, 15 ನವೆಂಬರ್ 2021 (20:58 IST)
ಬೆಂಗಳೂರು: ಹಿರಿಯ ನಾಗರಿಕರೊಬ್ಬರನ್ನು ನಿಗದಿತ ನಿಲ್ದಾಣದಿಂದ ಹತ್ತಿಸಿಕೊಳ್ಳದೆ ಬಿಟ್ಟು ಬಂದಿದ್ದಕ್ಕೆ 1 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಗ್ರಾಹಕ ಕೋರ್ಟ್ ಆದೇಶಿಸಿದೆ.
ಟಿಕೆಟ್ ಕಾಯ್ದಿರಿಸಿದ್ದರೂ ತಮ್ಮನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಬಂದಿದ್ದಾರೆ. ಇದರಿಂದಾಗಿ ತಾವು ತಮಿಳುನಾಡಿನಿಂದ ಎರಡು ಬಸ್‌ಗಳನ್ನು ಬದಲಿಸಿ ಬರುವಂತಾಯಿತು ಎಂದು ಬೆಂಗಳೂರಿನ ಬನಶಂಕರಿ ನಿವಾಸಿ ಎಸ್. ಸಂಗಮೇಶ್ವರನ್ ನಗರದ 2ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ ಅವರು ಬದಲಿ ಬಸ್​​​ನಲ್ಲಿ ಬಂದ ವೆಚ್ಚ ಭರಿಸುವಂತೆ ಹಾಗೂ ಅವರಿಗೆ ಆಗಿರುವ ಹಿಂಸೆಗೆ 1 ಸಾವಿರ ಪರಿಹಾರ ಪಾವತಿಸುವಂತೆ ನಿಗಮಕ್ಕೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ : ಬನಶಂಕರಿ 3ನೇ ಹಂತದ ನಿವಾಸಿಯಾಗಿರುವ ಎಸ್ ಸಂಗಮೇಶ್ವರನ್ ಅವರು ಬೆಂಗಳೂರಿನಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗಿ ಬರಲು ಕೆಎಸ್‌ಆರ್‌ಟಿಸಿ ಐರಾವತ್ ಕ್ಲಬ್ ಕ್ಲಾಸ್‌ ಟಿಕೆಟ್​​ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದರು. ಅದರಂತೆ, 2019ರ ಅಕ್ಟೋಬರ್ 12ರಂದು ಬೆಂಗಳೂರಿನಿಂದ ಹೊರಟು ಮರುದಿನ ನಗರಕ್ಕೆ ಹಿಂತಿರುಗಬೇಕಿತ್ತು. ಅದಕ್ಕಾಗಿ ಮಧ್ಯಾಹ್ನದ ಹೊತ್ತಿಗೆ ಗೊತ್ತುಪಡಿಸಿದ ಬಸ್ ನಿಲ್ದಾಣವನ್ನು ತಲುಪಿದರು. ಒಂದು ಗಂಟೆಗೂ ಹೆಚ್ಚು ಕಾಲ ಕಾದರೂ ಬಸ್‌ನ ಸುಳಿವೇ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಸಂಗಮೇಶ್ವರನ್ ಟಿಕೆಟ್ ಬುಕ್ಕಿಂಗ್ ಟೈಮ್‌ನಲ್ಲಿ ಬಂದಿದ್ದ ಎಸ್ಎಂಎಸ್‌ನಲ್ಲಿದ್ದ ಕಂಡಕ್ಟರ್ ನಂಬರ್‌ಗೆ ಫೋನ್ ಮಾಡಿದ್ದರು. ಕರೆ ಸ್ವೀಕರಿಸಿದ ಕಂಡಕ್ಟರ್, ಬಸ್ ತಿರುವಣ್ಣಾಮಲೈ ನಿಲ್ದಾಣಕ್ಕೆ ಬರಲಿಲ್ಲ. ಪೊಲೀಸರ ಸೂಚನೆಯಂತೆ ಪಿಕಪ್ ಪಾಯಿಂಟ್ ಬದಲಾಗಿತ್ತು. ಅದರಂತೆ ಹೊಸ ತಾತ್ಕಾಲಿಕ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಬಸ್‌ ಹೊರಟಿದ್ದಾಗಿದೆ ಎಂದರು.
ಪ್ರಕರಣದಲ್ಲಿ ಖುದ್ದು ಸಂಗಮೇಶ್ವರನ್ ತಮ್ಮ ವಾದವನ್ನು ಮಂಡಿಸಿದರು, ವಾದ ಅಲ್ಲಗಳೆದ ಕೆಎಸ್ಆರ್‌ಟಿಸಿ ಪರ ವಕೀಲರು, ಘಟನೆ ನಡೆದ ಸ್ಥಳ ತಿರುವಣ್ಣಾಮಲೈ ಆಗಿರುವುದರಿಂದ ವಿಚಾರಣೆ ವ್ಯಾಪ್ತಿ ಈ ನ್ಯಾಯಾಲಯಕ್ಕೆ ಬರುವುದಿಲ್ಲ. ಆದ್ದರಿಂದ ಪ್ರಕರಣವನ್ನು ವಜಾಗೊಳಿಸಬೇಕು ಎಂದು ವಕೀಲರು ಕೋರಿದ್ದರು.ಅಲ್ಲದೇ, ಹುಣ್ಣಿಮೆ ಸಮಯದಲ್ಲಿ ಜನಸಂದಣಿ ನಿಯಂತ್ರಿಸಲು ಸ್ಥಳೀಯ ಪೊಲೀಸರು ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಹೊರ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಈ ಬಗ್ಗೆ ಬಸ್‌ ಕಂಡಕ್ಟರ್ ದೂರುದಾರರಿಗೆ ಎಸ್‌ಎಂಎಸ್ ಕಳುಹಿಸಿದ್ದಾರೆ. ಅದರಂತೆ ಇತರೆ 23 ಪ್ರಯಾಣಿಕರು ಬಸ್‌ ಹತ್ತಿದ್ದರೂ, ದೂರುದಾರರು ಬಂದಿಲ್ಲ. ಇದು ಅವರದೇ ತಪ್ಪು ಎಂದು ವಾದಿಸಿದ್ದರು.
ಕೆಎಸ್ಆರ್‌ಟಿಸಿ ತನ್ನ ವಾದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ಅಭಿಪ್ರಾಯಪಟ್ಟ ಕೋರ್ಟ್, ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಟ್ರಾಫಿಕ್ ಜನರಲ್ ಮ್ಯಾನೇಜರ್ ಐರಾವತ್ ಟಿಕೆಟ್‌ ಬುಕ್ಕಿಂಗಿಗೆ ಪಾವತಿಸಿದ್ದ 497 ರೂ. ಮತ್ತು ಪರ್ಯಾಯ ಬಸ್ ಪ್ರಯಾಣಕ್ಕಾಗಿ 131 ರೂ. ಮತ್ತು 69 ರೂ. ಮರುಪಾವತಿಸುವಂತೆ ಆದೇಶಿಸಿದೆ. ಅಲ್ಲದೇ, ಬೆಂಗಳೂರಿಗೆ ಹಿಂತಿರುಗಲು ಹಿರಿಯ ನಾಗರಿಕರು ತೊಂದರೆ ಎದುರಿಸಿದ್ದಕ್ಕೆ 1 ಸಾವಿರ ರೂಪಾಯಿ ಪರಿಹಾರವನ್ನು 1 ತಿಂಗಳಲ್ಲಿ ಪಾವತಿಸುವಂತೆ ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿ ಗ್ರೂಪ್​ ನೌಕರರ ಸಂಘದ ಅಧ್ಯಕ್ಷನಿಂದ ಸೈಟ್​ ವಂಚನೆ ಪ್ರಕರಣ