Publish Date: Sun, 05 Dec 2021 (18:08 IST)
Updated Date: Sun, 05 Dec 2021 (18:12 IST)
ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಣ್ಣ ಬಯಲಾಗಿದೆ.
ಜನಬಲ ಇಲ್ಲದಿರುವ ಕಾರಣ ಹಣದ ಮುಖಾಂತರವೇ ಚುನಾವಣೆ ಗೆಲ್ಲಬೇಕೆಂದು ಹುನ್ನಾರ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಆನೇಕಲ್ನ ಅತ್ತಿಬೆಲೆಯಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಣವಿರುವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ, ಹಣ ಖರ್ಚು ಮಾಡಿ ಜೊತೆಗೆ ಪಕ್ಷಕ್ಕೂ ನೀಡಿ, ಯಾವುದೇ ಮಾರ್ಗ ಅನುಸರಿಸಿ ಚುನಾವಣೆ ಗೆಲ್ಲಬೇಕೆನ್ನುವ ಅವರ ಚಿಂತೆನೆ ಅತ್ಯಂತ ಕೀಳು ಮಟ್ಟದ್ದಾಗಿದೆ. ಕಾಂಗ್ರೆಸ್ನ ನೈತಿಕತೆ ಕೆಳಮಟ್ಟಕ್ಕೆ ಇಳಿದಿರುವುದು ಬಹಳ ಸ್ಪಷ್ಟವಾಗಿದೆ. ಅನೈತಿಕವಾಗಿ ಹಣ ಖರ್ಚು ಮಾಡಿ ಗೆಲ್ಲಲು ಬಯಸಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಸರಿಯಾದ ಜಾಗವನ್ನು ತೋರಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ ಎಂದು ಅವರಿಗೆ ಮುಂಚೆಯೇ ತಿಳಿದಿತ್ತು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಹಣ ಒದಗಿಸಿತು. ನಮ್ಮ ಸರ್ಕಾರ 4 ಲಕ್ಷ ಗ್ರಾಮೀಣ ಪ್ರದೇಶದಲ್ಲಿ ಹಾಗೂ 1 ಲಕ್ಷ ನಗರ ಪ್ರದೇಶದಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಂಡಿದೆ. ಸದರಿ ಮನೆಗಳನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.