ನಿಷೇಧಿತ ಪಿಎಫ್‍ಐ ಮತ್ತು ಎಸ್‍ಡಿಪಿಐ ನಂತಹ ಶಕ್ತಿಗಳೊಂದಿಗೆ ತಾವು ಹೊಂದಿರುವ ಸಂಬಂಧವೇನು ಎಂಬುದನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ದ್ವಿವೇದಿ ಮತ್ತು ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿಯಾದ ಭಾಸ್ಕರ್ ರಾವ್ ಅವರು ಆಗ್ರಹಿಸಿದರು.ಬೆಂಗಳೂರಿನ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಹೇಳಿ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಮೇಲಿನ 1,700 ಪ್ರಕರಣಗಳನ್ನು ಹಿಂತೆಗೆದುಕೊಂಡಿತ್ತು. ಇದು ಆ ಸಂಘಟನೆಗಳ ಮೇಲೆ ಕಾಂಗ್ರೆಸ್‍ಗಿರುವ ಪ್ರೀತಿ ಮತ್ತು ಸಂಬಂಧವನ್ನು ತೋರುತ್ತದೆ ಎಂದು ಟೀಕಿಸಿದರು.ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಂಪಿ ಉತ್ಸವ ನಿರ್ಲಕ್ಷಿಸಿ, ಟಿಪ್ಪು ಜಯಂತಿ ಆಚರಣೆಗೆ ಆಸಕ್ತಿ ತೋರಿತು. 2019ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಟಿಪ್ಪುಗೆ ಗೌರವ ನಮನ ಸಲ್ಲಿಸಿದ್ದರು. ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಗೆ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಕುಮ್ಮಕ್ಕು ನೀಡಿದ್ದವು. ಹಿಜಾಬ್ ವಿವಾದವನ್ನು ಸಹ ಇದೇ ಸಂಘಟನೆಗಳು ಹುಟ್ಟು ಹಾಕಿದ್ದವು ಎಂದು ಅವರು ಆರೋಪಿಸಿದರು