ನವದೆಹಲಿ(ಜು.29): ಪೆಗಾಸಸ್ ಬೇಹುಗಾರಿಕೆ ಮತ್ತು ಕೃಷಿ ಕಾಯ್ದೆಗಳ ವಿಚಾರಗಳ ಚರ್ಚೆಗೆ ಕಲಾಪ ಆರಂಭವಾದಾಗಿನಿಂದಲೂ ಆಗ್ರಹಿಸುತ್ತಿರುವ ಕಾಂಗ್ರೆಸ್ ಸದಸ್ಯರು ಸದನದ ಪ್ರತಿಗಳು ಹಾಗೂ ಭಿತ್ತಪತ್ರಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದು ಪೀಠಕ್ಕೆ ಅಗೌರವ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಥ ಕೃತ್ಯದಲ್ಲಿ ಭಾಗಿಯಾದ ಕಾಂಗ್ರೆಸ್ನ 10 ಸಂಸದರ ವಿರುದ್ಧ ಕೇಂದ್ರ ಸರ್ಕಾರ ಅಮಾನತು ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿದೆ.
* 10 ಸಂಸದರ ಅಮಾನತಿಗಾಗಿ ಸರ್ಕಾರ ಗೊತ್ತುವಳಿಗೆ ನಿರ್ಧಾರ
* ಕಾಗದ ಹರಿದು ಸ್ಪೀಕರ್ ಪೀಠದತ್ತ ಎಸೆದ ಕಾಂಗ್ರೆಸ್ ಸಂಸದರು
ಹೀಗಾಗಿ ಕಾಂಗ್ರೆಸ್ ಸಂಸದರಾದ ಟಿ. ಎನ್ ಪ್ರತಾಪನ್, ಹಿಬಿ ಎಡನ್, ಗುರ್ಜೀತ್ ಸಿಂಗ್ ಔಜ್ಲಾ, ಮಾಣಿಕ್ಯಂ ಠಾಗೋರ್, ದೀಪಕ್ ಬೈಜ್, ಎ.ಎಂ ಆರಿಫ್ ಮತ್ತು ಜ್ಯೋತಿಮಣಿ ಸೇರಿದಂತೆ ಮುಂದಿನ ಕಲಾಪಗಳಿಂದ ಅಮಾನತು ಆಗುವ ಭೀತಿಯಲ್ಲಿದ್ದಾರೆ.
ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕರು ಪೆಗಾಸಸ್ ಮತ್ತು ದೇಶದ ಅನ್ನದಾತರ ವಿಚಾರಕ್ಕೆ ಸಂಬಂಧಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಸದನದ ಬಾವಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿಪಕ್ಷಗಳ ಗದ್ದಲದ ಮಧ್ಯೆಯೇ ಇದೇ ಮೊದಲ ಬಾರಿಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಶ್ನೋತ್ತರ ಅವಧಿಯನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ಸ್ಪೀಕರ್ ಬಿರ್ಲಾ ಅವರು ಪೀಠದಿಂದ ತೆರಳಿದರು. ಈ ವೇಳೆ ರಾಜೇಂದ್ರ ಅಗರ್ವಾಲ್ ಅವರು ಪೀಠದ ನೇತೃತ್ವ ವಹಿಸಿದರು. ಆಗ ಕಾಂಗ್ರೆಸ್ ಸೇರಿದಂತೆ ಇನ್ನಿತರ ವಿಪಕ್ಷಗಳ ಸದಸ್ಯರು ಸದನದ ಪ್ರತಿಗಳು ಮತ್ತು ಭಿತ್ತಪತ್ರಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದಿದ್ದಾರೆ. ಕೆಲವು ಕಾಗದಗಳು ಸಚಿವ ಪ್ರಹ್ಲಾದ ಜೋಶಿ ಅವರ ಸಮೀಪ ಬಿದ್ದವು.
ಇಡೀ ದಿನ ನಡೆಯದ ಕಲಾಪ:
ಗದ್ದಲದ ಕಾರಣ ಇಡೀ ದಿನ ಕಲಾಪ ಸಾಧ್ಯವಾಗಲಿಲ್ಲ. ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಸತತ 7ನೇ ದಿನವಾದ ಬುಧವಾರ ಕೂಡ ಗುರುವಾರಕ್ಕೆ ಮುಂದೂಡಿಕೆ ಆದವು.