ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದರೆ ಇತ್ತ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಿಲಿಂಡರ್ ಹಿಡಿದು ಪ್ರತಿಭಟನೆಗೆ ಮುಂದಾಗಿದೆ.
ಇಂದಿನಿಂದ ಎಲ್ ಪಿಜಿ ಸಿಲಿಂಡರ್ ದರದಲ್ಲಿ 50 ರೂ. ಏರಿಕೆಯಾಗಿದೆ. ಇದನ್ನೇ ಈಗ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸ್ತ್ರವಾಗಿ ಬಳಸಿದೆ. ಕಳೆದ ಆಗಸ್ಟ್ ಬಳಿಕ ಇದೇ ಮೊದಲ ಬಾರಿಗೆ ಎಲ್ ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ಇದೀಗ 50 ರೂ. ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರಲಿದೆ.
ಇದೀಗ ಕಾಂಗ್ರೆಸ್ ಗೆ ಅಸ್ತ್ರವಾಗಿದೆ. ಬಿಜೆಪಿ ಜನಾಕ್ರೋಶ ಯಾತ್ರೆಗೆ ಪ್ರತಿಯಾಗಿ ಇಂದು ಕಾಂಗ್ರೆಸ್ ಎಲ್ ಪಿಜಿ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಿದೆ. ಬೆಲೆ ಏರಿಕೆ ವಿರುದ್ಧ ಹೋರಾಡುವ ಬಿಜೆಪಿಯವರಿಗೆ ಮೋದಿಯವರೇ ಮಸಿ ಬಳಿದಂತಾಗಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಇಂದು ಆನಂದ್ ರಾವ್ ವೃತ್ತದ ಬಳಿಯಿರುವ ಫ್ರೀಡಂ ಪಾರ್ಕ್ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಇಂದು ಪ್ರತಿಭಟನೆ ನಡೆಸಲಿರುವುದಾಗಿ ಕೆಪಿಸಿಸಿ ಪ್ರಕಟಣೆ ತಿಳಿಸಿದೆ.