ಬೆಂಗಳೂರು: ಭಾರತ ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಬ್ರಹ್ಮೋಸ್ ಕ್ಷಿಪಣಿ ಪ್ರಯೋಗ ಭಾರೀ ಸದ್ದು ಮಾಡಿತ್ತು. ಇದೀಗ ಕಾಂಗ್ರೆಸ್ ಈ ಕ್ಷಿಪಣಿಯನ್ನು ಭಾರತೀಯ ಸೇನೆಗೆ ನೀಡಿದ್ದು ನಾವು ಎಂದು ಹೇಳಿಕೊಂಡಿದೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಹಾಗಿದ್ದರೆ ಮುಂಬೈನಲ್ಲಿ ಉಗ್ರ ದಾಳಿಯಾದಾಗ ಅದನ್ನು ಆಯುಧ ಪೂಜೆಗಿಡಲಾಗಿತ್ತೇ ಎಂದು ಲೇವಡಿ ಮಾಡಿದ್ದಾರೆ.
2004 ರಲ್ಲಿ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೆಹಲಿಯಲ್ಲಿ ಬ್ರಹ್ಮೋಸ್ ಮುಖ್ಯಕಚೇರಿಯನ್ನು ಉದ್ಘಾಟಿಸಲಾಯಿತು. 2005 ರಲ್ಲಿ ಅದನ್ನು ಭಾರತೀಯ ನೌಕಾ ದಳಕ್ಕೆ 2007 ರಲ್ಲಿ ಭೂ ಸೇನೆಗೆ ಮತ್ತು 2012 ರಲ್ಲಿ ವಾಯು ಸೇನೆಗೆ ಸೇರ್ಪಡೆಗೊಳಿಸಲಾಯಿತು ಎಂದು ಕಾಂಗ್ರೆಸ್ ವಕ್ತಾರ ಜೈರಾಂ ರಮೇಶ್ ಹೇಳಿಕೆ ನೀಡಿದ್ದರು.
ಇದನ್ನು ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಎಕ್ಸ್ ಪೇಜ್ ಬ್ರಹ್ಮೋಸ್ ಕ್ಷಿಪಣಿ ಭಾರತೀಯ ಸೇನೆಗೆ ಸೇರಿದ್ದರ ಕ್ರೆಡಿಟ್ ಕಾಂಗ್ರೆಸ್ ಸರ್ಕಾರದ್ದು ಎಂದು ಹೇಳಿಕೊಂಡಿದೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಒಬ್ಬರಂತೂ ಹಾಗಿದ್ದರೆ 2008 ರಲ್ಲಿ ಮುಂಬೈ ಮೇಲೆ ಉಗ್ರ ದಾಳಿಯಾದಾಗ ಈ ಬ್ರಹ್ಮೋಸ್ ಕ್ಷಿಪಣಿಯನ್ನು ಆಯುಧ ಪೂಜೆಗಿಡಲಾಗಿತ್ತಾ ಎಂದು ಲೇವಡಿ ಮಾಡಿದ್ದಾರೆ. ಸೇನೆಗೆ ಸೇರ್ಪಡೆಯಾಗಿದ್ದು ಆಗ ಇರಬಹುದು ಆದರೆ ಬಳಸುವುದು ಹೇಗೆ ಎಂದು ತೋರಿಸಿದ್ದು ಈಗ ಎಂದು ತಿರುಗೇಟು ನೀಡಿದ್ದಾರೆ.