Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಗುರುವಾರ, 27 ಜೂನ್ 2024 (14:13 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು  ದೆಹಲಿಗೆ ಪ್ರಯಾಣ ಬೆಳೆಸಿದ್ದು, ಜೂನ್ 29ರಂದು 8.00ಗಂಟೆಗೆ ಪ್ರಧಾನಿಗಳ ಭೇಟಿಗೆ ಸಮಯ ನಿಗದಿಯಾಗಿದೆ. 
 
ಅವರು ಇಂದು ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ನಾಡಪ್ರಭು ಕೆಂಪೇಗೌಡರ  515 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
 
ರಾಜ್ಯದಿಂದ ಗೆದ್ದಿರುವ ಎಲ್ಲಾ ಲೋಕಸಭಾ ಹಾಗು ರಾಜ್ಯಸಭಾ ಸದಸ್ಯರನ್ನು, ಹಾಗೂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಕೇಂದ್ರದಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ರಾಜ್ಯ ಸರ್ಕಾರದ ಪರವಾಗಿ ಎಲ್ಲರೂ ಈ ಯೋಜನೆಗಳನ್ನು ಮಂಜೂರು ಮಾಡಿಸುವುದು, ಹಣ ಬಿಡುಗಡೆ ಮಾಡಿಸುವುದು, ಸಂಪನ್ಮೂಲ ಹೆಚ್ಚು ಮಾಡಲು ಪ್ರಯತ್ನ ಪಡಬೇಕೆಂದು ತಿಳಿಸಲು ನೂತನ ಸಂಸದರನ್ನು ಭೇಟಿ ಮಾಡಲಾಗುವುದು ಎಂದರು.
 
ಕೇಂದ್ರ ಸಚಿವರ ಭೇಟಿ
ವಿಶೇಷವಾಗಿ ನಮ್ಮ ಸಚಿವರೂ ಕೂಡ ಜೊತೆಗೂಡಿದ್ದು, ಪ್ರಧಾನಮಂತ್ರಿ ಭೂಸಾರಿಗೆ ಸಚಿವರು,ರೈಲ್ವೆ, ನೀರಾವರಿ , ಗೃಹ ಸಚಿವರು ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಲಿರುವುದಾಗಿ ಹೇಳಿದರು. ಗೃಹಸಚಿವರು ಭೇಟಿಗೆ  ಇನ್ನೂ  ಸಮಯ ನಿಗದಿಮಾಡಿಲ್ಲ. ಶೀಘ್ರವೇ ಮಾಡುತ್ತಾರೆ.ನಿತಿನ್ ಗಡ್ಕರಿಯವರು ಸಮಯ ನಿಗದಿ ಮಾಡಿದ್ದಾರೆ ಎಂದು ತಿಳಿಸಿದರು.
 
ರಾಜ್ಯದಲ್ಲಿ ಆಗಬೇಕಿರುವ ಕೆಲಸಗಳಪಟ್ಟಿ ಕಳುಹಿಸಲಾಗಿದೆ
ಹೊಸ ಸರ್ಕಾರದಿಂದ ಮಂಡಿಸಲಾಗುವ ಬಜೆಟ್ ನಲ್ಲಿ  ಕರ್ನಾಟಕ ನಿರೀಕ್ಷೆ ಮಾಡುವ  ಕೆಲಸಗಳ ಪಟ್ಟಿಯನ್ನು ಕಂದಾಯ ಸಚಿವರು ಈಗಾಗಲೇ ಮಂಡಿಸಿದ್ದಾರೆ ಎಂದರು. ರಾಹುಲ್ ಗಾಂಧಿ ಜನರ ಧ್ವನಿಯಾಗಿ ಸಮರ್ಥವಾಗಿ ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ
 
ರಾಹುಲ್ ಗಾಂಧಿ ಹಾಗೂ ಪ್ರಧಾನಿಗಳು ಮೊದಲ ಬಾರಿಗೆ ಲೋಕಸಭಾಧ್ಯಕ್ಷರನ್ನು ಒಟ್ಟಿಗೆ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳು ಹಾಗು ವಿಪಕ್ಷ ನಾಯಕ ಜೊತೆಗೆ ಹೋಗಿ ಅವರ ಪೀಠದ ಮೇಲೆ ಕುಳ್ಳಿರಿಸಿ ಶುಭಾಶಯ ಹೇಳುವುದು ಮೊದಲಿನಿಂದಲೂ ನಡೆದುಬಂದಿರುವ ಸಂಪ್ರದಾಯ.ಅದರಂತೆ ನಡೆದುಕೊಂಡಿದ್ದಾರೆ. ನರೇಂದ್ರಮೋದಿ ಮೂರನೇ ಬಾರಿಗೆ ಪ್ರಧಾನಿಗಳಾಗಿದ್ದಾರೆ. ರಾಹುಲ್ ಗಾಂಧಿ ಇಡೀ ದೇಶವನ್ನು ಪಾದಯಾತ್ರೆ ಮೂಲಕ ಸುತ್ತಿದ್ದಾರೆ . ಅವರಿಗೆ ದೇಶದ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿ ಜನರ ಧ್ವನಿಯಾಗಿ ಸಮರ್ಥವಾಗಿ ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಭಾರತ ಬಹುತ್ವದ ಸಂಸ್ಕೃತಿ ಇರುವ ರಾಷ್ಟ
 
ನೋಬೆಲ್ ಪ್ರಶಸ್ತಿ ಪುರಸ್ಕ್ರತ ಅಮಾರ್ತ್ಯ ಸೇನ್ ಅವರು ಲೋಕಸಭಾ ಚುನಾವಣೆಯ ಫಲಿತಾಂಶದಿಂದ ಭಾರತ ಹಿಂದೂ ರಾಷ್ಟ್ರವಲ್ಲ, ಎಲ್ಲರಿಗೂ ಸೇರಿದ ರಾಷ್ಟ್ರ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಭಾರತ ಬಹುತ್ವದ ದೇಶ ಎಂದು ಮೊದಲಿನಿಂದಲೂ ಹೇಳುತ್ತಿದ್ದೇವೆ.  ಕೇವಲ ಹಿಂದೂಗಳ ರಾಷ್ಟ್ರವಾಗಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಧರ್ಮ, ಭಾಷೆಯವರು ಇದ್ದು, ಬಹುತ್ವದ ಸಂಸ್ಕೃತಿ ಇರುವ ರಾಷ್ಟವಾಗಿದೆ ಎಂದರು. ಅಮಾರ್ತ್ಯ ಸೇನ್ ಹೇಳಿರುವುದು ಸರಿಯಿದ್ದು, ನಾವೂ ಅದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದೇವೆ ಎಂದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ವಿಶ್ವವಿಖ್ಯಾತವಾಗಲು ಕೆಂಪೇಗೌಡರು ಕಾರಣ: ಸಿಎಂ ಸಿದ್ದರಾಮಯ್ಯ