ಬೆಂಗಳೂರು: "ಮೂರು ಬಿಟ್ಟವರು ಊರಿಗೆ ದೊಡ್ಡವರು" ಎಂಬಂತೆ ದಲಿತರ ದುಡ್ಡು ಹೊಡೆದಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಲೆಕ್ಕ ಕೊಡಿ ಸ್ವಾಮಿ ಅಂದರೆ ಎಲ್ಲ ಪತ್ರಿಕೆಗಳಲ್ಲೂ ಪುಟಗಟ್ಟಲೆ ಜಾಹೀರಾತು ಕೊಟ್ಟು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿಬರೆದುಕೊಂಡಿರುವ ಆರ್ ಅಶೋಕ್ ಅವರು, ಕಾಂಗ್ರೆಸ್‌ನ ತಟ್ಟೆಯಲ್ಲಿ ದೊಡ್ಡ ಹೆಗ್ಗಣ ಬಿದ್ದು ಭ್ರಷ್ಟಾಚಾರದ ಗಬ್ಬು ವಾಸನೆ ದೇಶಕ್ಕೆಲ್ಲಾ ಬಡಿಯುತ್ತಿದ್ದರೆ, ಹಿಂದಿನ ಸರ್ಕಾರಗಳ ತಟ್ಟೆಯಲ್ಲಿ ನೊಣ ಬಿದ್ದಿತ್ತು ಎಂದು ತಿಪ್ಪೆ ಸಾರಿಸುತ್ತೀರಲ್ಲ, ನಿಮ್ಮ ಭಂಡತನಕ್ಕೆ ಏನು ಹೇಳೋಣ?
ತಮ್ಮ ಸರ್ಕಾರದಲ್ಲಿ, ಅದರಲ್ಲೂ ತಾವೇ ನಿರ್ವಹಿಸುವ ಹಣಕಾಸು ಇಲಾಖೆಯ ಮೂಗಿನಡಿ ಭ್ರಷ್ಟಾಚಾರ ನಡೆದಿರುವಾಗ, ಅದಕ್ಕೆ ಮುಖ್ಯಮಂತ್ರಿಯಾಗಿ ತಾವು ಜವಾಬ್ದಾರರಲ್ಲ, ಅಂದರೆ ಅದರ ಈ ಹಗರಣದ ಹೊಣೆ ನಿಮ್ಮ ಪ್ರಕಾರ ಯಾರು ಹೊರಬೇಕು?
40 ವರ್ಷಗಳಿಂದ ತಾವು ಹಾಕಿಕೊಂಡಿದ್ದ ಎಲ್ಲ ಮುಖವಾಡಗಳು ಕಳಚಿ ಬಿದ್ದಿವೆ. ಸಮಾಜವಾದಿ ಎಂಬ ಸೋಗಿನಲ್ಲಿ ದಲಿತರ ದುಡ್ಡು ಲೂಟಿ ಹೊಡೆಯುವ ತಮ್ಮ ಮುಖವಾಡ ಬಯಲಾಗಿದೆ. ತಮ್ಮ ಡೋಂಗಿ 'ಶುದ್ಧ'ಹಸ್ತಕ್ಕೆ ಎಂದೂ ಅಳಿಸಲಾಗದ ಭ್ರಷ್ಟಚಾರದ ಮಸಿ ಅಂಟಿಕೊಂಡಿದೆ.
ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ, SCSP/TSP ನಿಧಿಯ ₹14,000 ಕೋಟಿ ದುರುಪಯೋಗ, ಮುಡಾದಲ್ಲಿ 35 ಕೋಟಿ ಬೆಲೆಬಾಳುವ 14 ಸೈಟು ಗುಳುಂ, ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲೇ ಇಷ್ಟು ಲೂಟಿ ಮಾಡಿರುವ ತಾವು ಇನ್ನು ತಮ್ಮ ಮೊದಲ ಅವಧಿಯಲ್ಲಿ ಎಷ್ಟು ಸಾವಿರ ಕೋಟಿ ಹಣ ಲೂಟಿ ಮಾಡಿದ್ದೀರೋ ಆ ದೇವರೇ ಬಲ್ಲ.
ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹೀರಾತು ಕೊಟ್ಟುಬಿಟ್ಟರೆ, ಪತ್ರಿಕಾಗೋಷ್ಠಿ ಮಾಡಿ ನಾಲ್ಕು ದುರಹಂಕಾರದ ಮಾತುಗಳನ್ನ ಆಡಿಬಿಟ್ಟರೆ, ಜಾತಿ, ಇಡಿ ಹೆಸರು ಹೇಳಿ ಅನುಕಂಪ ಗಿಟ್ಟಿಸಿಕೊಂಡು ಬಿಟ್ಟರೆ ಈ ಹಗರಣದಿಂದ ಬಚಾವ್ ಆಗಬಹುದು ಎನ್ನುವ ಭ್ರಮೆಯಲ್ಲಿದ್ದರೆ ಅದು ನಿಮ್ಮ ಮೂರ್ಖತನ.
ವಾಲ್ಮೀಕಿ ನಿಗಮದ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವ ತನಕ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ.
ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀರಿ, ಸತ್ಯವನ್ನ ಮರೆಮಾಚುವ ಪಾಪದ ಕೆಲಸ ಮಾಡಬೇಡಿ. ಸತ್ಯಮೇವ ಜಯತೆ!<>