ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ಅಸ್ತು ಎನ್ನುತ್ತಿದ್ದಂತೇ ಬಿಜೆಪಿ ನಾಯಕರಲ್ಲಿ ಉತ್ಸಾಹ ಹೆಚ್ಚಿದೆ. ಇಂದು ವಿಧಾನಸೌಧದ ಎದುರು ಬಿಜೆಪಿ ನಾಯಕರು ಭಾರೀ ಪ್ರತಿಭಟನೆ ನಡೆಸಲಿದ್ದಾರೆ.
ಮುಡಾ ಹಗರಣ ವಿಚಾರವಾಗಿ ಬಿಜೆಪಿ ಈಗಾಗಲೇ ಮೈಸೂರು ಪಾದಯಾತ್ರೆ ನಡೆಸಿತ್ತು. ಅದಾದ ಬಳಿಕ ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದೆ. ಇದೀಗ ರಾಜ್ಯಪಾಲರಿಂದಲೇ ತನಿಖೆಗೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೇ ಬಿಜೆಪಿ ನಾಯಕರ ಉತ್ಸಾಹ ಇಮ್ಮಡಿಯಾಗಿದೆ. ಇದು ತಮ್ಮ ಹೋರಾಟಕ್ಕೆ ಸಂದ ಜಯ ಎಂದೇ ಬಿಜೆಪಿ ನಾಯಕರು ಬೀಗುತ್ತಿದ್ದಾರೆ.
ಇಂದು ಬಿಜೆಪಿ ರಾಜ್ಯಾದ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇದಕ್ಕೆ ದೋಸ್ತಿ ಪಕ್ಷ ಜೆಡಿಎಸ್ ನಾಯಕರೂ ಸಾಥ್ ನೀಡುವ ಸಾಧ್ಯತೆಯಿದೆ.
ಬಿಜೆಪಿ ನಾಯಕರಾದ ಆರ್. ಅಶೋಕ್, ಡಾ ಸಿಎನ್ ಅಶ್ವತ್ಥನಾರಾಯಣ, ಪರಿಷತ್ ನಾಯಕ ಛಲವಾದಿ ನಾರಾಯಣ ಸ್ವಾಮಿ ಸೇರಿಂದತೆ ಬಿಜೆಪಿಯ ಎಲ್ಲಾ ಸಂಸದರು, ಶಾಸಕರು, ನಾಯಕರು ಇಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಘಟಕೆ ಪ್ರಕಟಣೆ ನೀಡಿದೆ. ರಾಜ್ಯಪಾಲರು ತನಿಖೆಗೆ ಆದೇಶಿಸುತ್ತಿದ್ದಂತೇ ಇದೀಗ ಬಿಜೆಪಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.