Select Your Language

Notifications

webdunia
webdunia
webdunia
webdunia

ಡ್ರಗ್ಸ್ ಹಾವಳಿ ತಡೆಯಲು ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

Siddaramaiah pressmeet

Krishnaveni K

ಬೆಂಗಳೂರು , ಬುಧವಾರ, 18 ಸೆಪ್ಟಂಬರ್ 2024 (16:10 IST)
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಮಾದಕ ವಸ್ತು ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಸಿಎಂ ಸಿದ್ದರಾಮಯ್ಯ ಇಂದು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಈ ಬಗ್ಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ಗೃಹಸಚಿವ ಪರಮೇಶ್ವರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮುಂತಾದ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.

ರಾಜ್ಯದಲ್ಲಿ ಡ್ರಗ್ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನ ಮಾಡಲಾಗಿದ್ದು ಇದಕ್ಕಾಗಿ ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲು ತೀರ್ಮಾನಿಸಲಾಯಿತು. ಇದೇ ವೇಳೆ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸಿಎಂ ಸೂಚನೆ ನೀಡಿದರು.

ಈ ಟಾಸ್ಕ್ ಫೋರ್ಸ್ ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಟಾಸ್ಕ್ ಫೋರ್ಸ್ ನಲ್ಲಿ ಇರುತ್ತಾರೆ. ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ ದಂಧೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಠಾಣಾಧಿಕಾರಿ ಡಿವೈಎಸ್ ಪಿ, ಎಸಿಪಿ ಮತ್ತು SP ಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ. ಇವರ ವಿರುದ್ಧವೇ ಕ್ರಮ ಖಚಿತ ಎಂದು ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ಡ್ರಗ್ಸ್ ಹಾವಳಿ ನಿಯಂತ್ರಿಸಲು ಅಗತ್ಯಬಿದ್ದರೆ ಹೊಸ ಕಾನೂನು ಮಾಡ್ತೇವೆ. ಇರುವ ಕಾನೂನನ್ನು ಇನ್ನಷ್ಟು ಗಟ್ಟಿ ಮಾಡ್ತೇವೆ. ಪೆಡ್ಲರ್ ಗಳಿಗೆ ಜೀವಾವಧಿ ಶಿಕ್ಷೆಯವರೆಗೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

 
ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು, ಸಮರ್ಪಕಗೊಳಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಡ್ರಗ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ವಿದ್ಯಾರ್ಥಿ, ಯುವ ಜನರ ಮೇಲೆ, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಮತ್ತು ಡ್ರಗ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್  ಹಾಕಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು, ಪೊಲೀಸರಿಗೆ free hand ಕೊಡುವ ಜೊತೆಗೆ ಅವರನ್ನೇ ಹೊಣೆ ಮಾಡಿ ಕ್ರಮ ಕೂಡ ತಗೊತೀವಿ ಎಂದಿದ್ದಾರೆ. ಗೃಹ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಮಾಜ‌ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಹಲವು ಕ್ಷಿಪ್ರ ತೀರ್ಮಾನಗಳನ್ನು ಕೈಗೊಂಡಿದ್ದೇವೆ.

ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಈಗಾಗಲೇ ಇರುವ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ. ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಬೆಂಗಳೂರು ಪೂರ್ವ ವಿಭಾಗದಲ್ಲಿ ಡ್ರಗ್ ಹಾವಳಿ ತೀವ್ರವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದಕ್ಕೆ ಬಲಿ‌ ಹಾಕಲು ನಿರ್ಣಯ ಮಾಡಿದ್ದೇವೆ. ಒಡಿಶ್ಶಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಸಿಎಂ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅದ್ಧೂರಿ ದಸರಾದಿಂದ ಅದ್ಧೂರಿ ಹಗರಣವಾಗದಿರಲಿ: ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ