Select Your Language

Notifications

webdunia
webdunia
webdunia
webdunia

ಮಳೆಗಾಲಕ್ಕೆ ಮುನ್ನ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್

Siddaramaiah-DK Shivakumar

Krishnaveni K

ಬೆಂಗಳೂರು , ಬುಧವಾರ, 22 ಮೇ 2024 (15:47 IST)
ಬೆಂಗಳೂರು: ಮಳೆಗಾಲ ಬರುತ್ತಿದ್ದಂತೇ ಬೆಂಗಳೂರಿನಲ್ಲಿ ಸಮಸ್ಯೆಗಳೂ ಹೆಚ್ಚಾಗುತ್ತವೆ. ಹೀಗಾಗಿಯೇ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ನಡೆಸಿ ಮಳೆ ಹೆಚ್ಚಾದರೆ ಸಂಭವಿಸಬಹುದಾದ ಅನಾಹುತಗಳ ಬಗ್ಗೆ ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದರು.

ವಿಜಯನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಶಾಂತಿನಗರ ಮೊದಲಾದೆಡೆ ಬಸ್ ನಲ್ಲಿ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆ ತಂದೊಡ್ಡಬಲ್ಲ ಸ್ಥಳಗಳ ಪರಿಶೀಲನೆ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಸಿಎಂ ಮತ್ತು ಡಿಸಿಎಂಗೆ ಸಚಿವ ರಾಮಲಿಂಗಾರೆಡ್ಡಿ ಮತ್ತಿತರರು ಸಾಥ್ ನೀಡಿದ್ದರು. ವಿಶೇಷವೆಂದರೆ ಸಿಎಂ ಮತ್ತು ಇತರರು ಬಸ್ ನಲ್ಲಿ ತೆರಳಿ ಸಿಟಿ ರೌಂಡ್ಸ್ ನಡೆಸಿದ್ದಾರೆ. ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಮತ್ತು ಯಾವೆಲ್ಲಾ ಸಮಸ್ಯೆಗಳಿವೆ, ಅದಕ್ಕೆ ಸಿಎಂ ಕೊಟ್ಟ ಸಲಹೆ ಸೂಚನೆ ಏನು ಎಂಬ ವಿವರ ಇಲ್ಲಿದೆ ನೋಡಿ.


ಸ್ಥಳ: ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
ಸಮಸ್ಯೆ ಏನು: ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದೆ.
 
ಮುಖ್ಯಮಂತ್ರಿಗಳ ಸೂಚನೆ ಏನು:
 ಇದಕ್ಕೆ ಸಮಾನಾಂತರವಾಗಿ ಇನ್ನೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹ ತಗ್ಗಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಪ್ರವಾಹ ನಿಯಂತ್ರಣ ಕಾಮಗಾರಿಗೆ 11.5 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದ್ದು, ಈ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಈ ರಾಜಕಾಲುವೆಗೆ ಸಾರ್ವಜನಿಕರು ಕಸ ಎಸೆಯುವುದನ್ನು ತಡೆಗಟ್ಟಲು ಕ್ರಮ ವಹಿಸುವಂತೆ ಸೂಚಿಸಿದರು.
 
ಸಮಸ್ಯೆ ಬಗೆಹರಿಸಲು ಕೊಟ್ಟ ಕಾಲ ಮಿತಿ ಮಳೆಗಾಲದೊಳಗೆ ಪೂರ್ಣಗೊಳಿಸಲು ಸೂಚಿಸಿದರು.
 
ಎಚ್ಚರಿಕೆ: ಈ ವರ್ಷ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು. ಇಲ್ಲದೊದ್ದರೆ ಸಸ್ಪೆಂಡ್ ಆಗ್ತೀರ ಎಂದು ಚೀಫ್ ಎಂಜಿನಿಯರ್ ಗೆ ಎಚ್ಚರಿಸಿದ ಸಿಎಂ

ಸ್ಥಳ: ನಾಯಂಡಹಳ್ಳಿ
ಸಮಸ್ಯೆ ಏನು: ರಾಜಕಾಲುವೆಯಲ್ಲಿ ಮಳೆಗಾಲ ಪ್ರವಾಹ ಉಂಟಾಗುತ್ತಿದೆ. ಫ್ಲೈಓವರ್‌ ನಿರ್ಮಿಸಿದ್ದರಿಂದ ರಾಜಕಾಲುವೆಯ ವಿಸ್ತಾರ ಕಡಿಮೆ ಆಗಿದೆ.
 
ಮುಖ್ಯಮಂತ್ರಿಗಳ ಸೂಚನೆ ಏನು: ನೀರು ಸರಾಗವಾಗಿ ಹರಿದುಹೋಗಲು ಹೆಚ್ಚುವರಿ ಕಾಲುವೆ ಅಗತ್ಯವಿದೆ. ಏಳುಕೋಟಿ ವೆಚ್ಚದ ಕಾಮಗಾರಿ ಅನುಮೋದನೆಯಾಗಿದ್ದು, ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ವಿವರಿಸಿದರು. ಅದರಂತೆ ಹಣಕಾಸು ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ನೀಡಿ, ಕೂಡಲೇ ಬಿಬಿಎಂಪಿಯು ಕಾಮಗಾರಿ ಕೈಗೆತ್ತಿಕೊಳ್ಳಲು ಅನುವು ಮಾಡುವಂತೆ ಎರಡೂ ಇಲಾಖೆಗಳಿಗೆ ಸೂಚನೆ ನೀಡಿದರು.
 
ಕಾಲಮಿತಿ: ಈ ವರ್ಷದೊಳಗೆ

ಸ್ಥಳ- 3:  ಬಿಟಿಎಂ ಮೆಟ್ರೋ ಸ್ಟೇಷನ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಸಂಚಾರ, ಸ್ಥಳ ಪರಿಶೀಲನೆ ವೇಳೆಗೆ ಬಿಟಿಎಂ ಮೆಟ್ರೋಸ್ಟೇಷನ್‌ಗೆ ಭೇಟಿ ನೀಡಿ ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್‌ ಡೆಕ್ಕರ್‌ - 2 tier ವ್ಯವಸ್ಥೆಯನ್ನು ಮುಖ್ಯಮಂತ್ರಿಗಳು ಪರಿಶೀಲಿಸಿದರು. ಮೂರು ಕಿ.ಮೀ. ಉದ್ದದ ಈ ವ್ಯವಸ್ಥೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸಂಚಾರ ದಟ್ಟಣೆ ನಿವಾರಣೆಗೆ ಈ ಡಬ್ಬಲ್ ಡೆಕರ್ ಮಾದರಿಯನ್ನು ನಗರದ ಇತರ ಭಾಗಗಳಲ್ಲಿಯೂ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 
 
ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸಂಚಾರ ದಟ್ಟಣೆಗೆ ಪರಿಹಾರ ರೂಪವಾಗಿ  ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ.
ಇದಲ್ಲದೆ, ಸುಗಮ ಸಂಚಾರಕ್ಕಾಗಿ, ಬಿಟಿಎಂ ನಿಂದ ಬನಶಂಕರಿ ಕಡೆಗೆ ಹೋಗುವಾಗ, ರಾಘವೇಂದ್ರಸ್ವಾಮಿ ಟೆಂಪಲ್‌ ಸರ್ಕಲ್‌, ಜಯನಗರ 5ನೇ ಬ್ಲಾಕ್‌ನಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿ ಅಂಡರ್‌ ಪಾಸ್‌ ನಿರ್ಮಿಸಲು ಸೂಚಿಸಿದರು.

ಸ್ಥಳ- 4: ಕೋಡಿ ಚಿಕ್ಕನಹಳ್ಳಿ
ಸಮಸ್ಯೆ: ರಾಜಕಾಲುವೆಯಿಂದ ನೀರು ಹೊರಗೆ ಹರಿದು, ಮನೆಗಳಿಗೆ ನೀರು ನುಗ್ಗುವ ಸಮಸ್ಯೆ
ಮುಖ್ಯಮಂತ್ರಿಯವರು ನೀಡಿದ ಸೂಚನೆಗಳು: ಇಲ್ಲಿನ ಪ್ರವಾಹ ನಿಯಂತ್ರಣಕ್ಕೆ ಜಾಕ್‌ವೆಲ್‌ ಮೂಲಕ ರಾಜಕಾಲುವೆಯಿಂದ ಹೊರ ಬರುವ ನೀರನ್ನು ಪಂಪ್‌ ಮಾಡಿ ಮಡಿವಾಳ ಕೆರೆಗೆ ಹರಿಸಲು ಸೂಚನೆ ನೀಡಿದರು. 4.3  ಕೋಟಿ ರೂ. ವೆಚ್ಚದ ಈ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸಲು ಸೂಚಿಸಿದರು.

ಸ್ಥಳ: ಸಿಲ್ಕ್‌ ಬೋರ್ಡ್‌
ಸಮಸ್ಯೆ: ಮಟ್ರೋ ಕಾಮಗಾರಿಯಿಂದಾಗಿ ಮಳೆನೀರು ಚರಂಡಿ ವಿಸ್ತೀರ್ಣ ಕಡಿಮೆಯಾಗಿ, ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. 
 
ಮುಖ್ಯಮಂತ್ರಿಯವರು ನೀಡಿದ ಸೂಚನೆಗಳು: ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು 4.5 ಕೋಟಿ ಕಾಮಗಾರಿ ಅಗತ್ಯವಿದೆ ಹಾಗೂ  ಸರ್ಕಾರದ ಉನ್ನತಾಧಿಕಾರ ಸಮಿತಿಯ ಅನುಮತಿ ಅಗತ್ಯವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿವರಿಸಿದರು. ಪರ್ಯಾಯ ವ್ಯವಸ್ಥೆಯ ಕಾಮಗಾರಿ ಕೈಗೊಳ್ಳಲು ಸಮ್ಮತಿಸಿದ ಮುಖ್ಯಮಂತ್ರಿಗಳು ಮುಂದಿನ ಉನ್ನತಾಧಿಕಾರ ಸಮಿತಿ ಸಭೆಯ ಮುಂದೆ ಮಂಡಿಸಲು ಸೂಚಿಸಿದರು. ಜೊತೆಗೆ ಈ ಯೋಜನೆಯನ್ನು ಮುಂದಿನ 10-15 ವರ್ಷಗಳ ಪರಿಣಾಮವನ್ನು ಗಮನದಲ್ಲಿರಿಸಿಕೊಂಡು ಕ್ರಿಯಾ ಯೋಜನೆ ರೂಪಿಸಲು ಸೂಚಿಸಿದರು. ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರ: ಶಾಂತಿನಗರ
ಸಮಸ್ಯೆ: ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದೆ. 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿ.
 
ಮುಖ್ಯಮಂತ್ರಿಯವರು ನೀಡಿದ ಸೂಚನೆಗಳು: ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಸಕ್ತ ಸರ್ಕಾರ ಅಧಿಕಾರಕ್ಕೆ ಬಂದನಂತರ ದಿನಾಂಕ 20-11-2023 ರಂದು BSCPL ಎಂಬ ಕಂಪೆನಿಗೆ ಕಾರ್ಯಾದೇಶ ನೀಡಲಾಗಿತ್ತು. ಟೆಂಡರ್‌ ಷರತ್ತಿನ ಪ್ರಕಾರ 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಳೆದ ಆರು ತಿಂಗಳಲ್ಲಿ ಕೇವಲ ಶೇ. 4 ರಿಂದ 6 ರಷ್ಟು ಪ್ರಗತಿಯಾಗಿದೆ. ಈ ಮಾಹಿತಿ ತಿಳಿದ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರಿಗೆ ನಿಯಮಾನುಸಾರ ನೋಟಿಸ್‌ ನೀಡಿ, ಸ್ಪಂದಿಸದಿದ್ದರೆ ಕಾನೂನು ಪ್ರಕಾರ ಟೆಂಡರ್‌ ರದ್ದುಪಡಿಸಿ, ಬೇರೆಯವರಿಗೆ ಗುತ್ತಿಗೆ ನೀಡುವಂತೆ ಸೂಚಿಸಿದರು.
 
ಅಗತ್ಯ ಹಣ ಕೊಟ್ಟಿದ್ದರೂ ಆರು ತಿಂಗಳಲ್ಲಿ ಕೇವಲ 4% ಕಾಮಗಾರಿ ಮಾಡಿದ್ದೀಯಲ್ಲಾ, ಸಾರ್ವಜನಿಕರಿಗೆ ಆಗುವ ತೊಂದರೆ ಬಗ್ಗೆ ಪ್ರಜ್ಞೆ ಬೇಡ್ವಾ, ನಿನ್ನ ಕೈಲಿ ಆಗದಿದ್ದರೆ ಜಾಗ  ಖಾಲಿ ಮಾಡಿ ಎಂದು ಕಂಪನಿ ಪ್ರತಿನಿಧಿಗಳಿಗೆ ಸಿಎಂ ಸ್ಪಷ್ಟ ಎಚ್ಚರಿಕೆ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಪ್ರಜ್ವಲ್ ಬಗ್ಗೆ ಮಾಹಿತಿಯಿಲ್ಲ, ಹಾಸನ ಜನರ ಸಹಕಾರಕ್ಕೆ ಋಣಿ: ರೇವಣ್ಣ