Select Your Language

Notifications

webdunia
webdunia
webdunia
webdunia

SP, IG ಹಂತದ ಪೊಲೀಸ್ ಅಧಿಕಾರಿಗಳು ನಾಳೆಯಿಂದಲೇ ಠಾಣೆಗಳಿಗೆ ಭೇಟಿ ನೀಡಬೇಕು: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

Karnataka Police

Krishnaveni K

ಬೆಂಗಳೂರು , ಶನಿವಾರ, 6 ಜುಲೈ 2024 (14:55 IST)
ಬೆಂಗಳೂರು:ಪ್ರತೀ SP-DCP-IG ಗಳು ಪೊಲೀಸ್ ಮ್ಯಾನ್ಯುಯಲ್ ತಮ್ಮ ವ್ಯಾಪ್ತಿಯ ಪ್ರಕಾರ ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಸೂಚನೆ ನೀಡಿದರು. 
 
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಷವನ್ನು ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. 
 
ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ SP ಮತ್ತು‌ IG ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. SP-IG ಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಎಚ್ಚರಿಸಿದರು. 
 
ನಾಳೆಯಿಂದಲೇ SP, IG ಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು ಎಂದು ಎಚ್ಚರಿಸಿದರು. 
 
ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ: ಇಲ್ಲಾಂದ್ರೆ ಕ್ರಮ ಎದುರಿಸಿ
 
ಫೇಕ್ ನ್ಯೂಸ್ ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ fact check ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್ ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ ಎಂದು ಎಚ್ಚರಿಸಿದರು. 
 
ಕೃತಕ ಬುದ್ದಿಮತ್ತೆ ಬಳಸಿ. ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದಾಖಲಿಸಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. 
 
ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ?
 
ಡ್ರಗ್ಸ್ ಮಾರೋರು ಯಾರು? ರೌಡಿಗಳು ಯಾರು?/ರಿಯಲ್ ಎಸ್ಟೇಟ್ ಮಾಡೋರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರತ್ತೆ. ಆದರೂ ಯಾಕೆ ನಿಲ್ಲುತ್ತಿಲ್ಲ‌ ಎಂದು ಪ್ರಶ್ನಿಸಿದರು. 
 
ನಿಮಗೆ ಗನ್ ಗಳನ್ನು ಕೊಟ್ಟಿರುವುದು ಏಕೆ ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ. ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದು ಎಚ್ಚರಿಸಿದರು. 
 
ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. 
 
ಗೃಹ ಸಚಿವರಿಗೆ,  ಕರ್ನಾಟಕ‌ ಪೊಲೀಸ್ ಗೆ ಅಭಿನಂಧಿಸಿದ ಸಿಎಂ 
 
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್ ಗೆ ಮುಖ್ಯಮಂತ್ರಿಗಳು ಅಭಿನಂಧಿಸಿದರು.‌
 
ಮುಖ್ಯಮಂತ್ರಿಗಳ ಮಾತಿನ ಇತರೆ ಹೈಲೈಟ್ಸ್...
 
*ತಪ್ಪುಗಳನ್ನು ಸರಿಮಾಡಿಕೊಂಡು ಗುಣಾತ್ಮಕ ಪೊಲೀಸ್ ವ್ಯವಸ್ಥೆ ಗಟ್ಟಿಗೊಳಿಸುವ ಮೂಲಕ ದೇಶದಲ್ಲಿ ಕರ್ನಾಟಕ‌ ಪೊಲೀಸ್ ಗೆ ಇರುವ ಉನ್ನತ ಹೆಸರನ್ನು ಉಳಿಸಿ-ಬೆಳೆಸಬೇಕು.
 
*ಸಮಾಜದಲ್ಲಿ ಎಲ್ಲರೂ ನಿಶ್ಚಿಂತೆಯಿಂದ, ಭಯ ಮುಕ್ತವಾಗಿ ವಾಸಿಸುವ ವಾತಾವರಣ ಇರಬೇಕು. ಮಹಾತ್ಮಗಾಂಧಿ ಅವರ ಮಾತು ಪ್ರಸ್ತಾಪಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ ಸಿಎಂ.
 
*ಕಾನೂನು ಸುವ್ಯವಸ್ಥೆ ಸುರಕ್ಷಿತವಾಗಿದ್ದರೆ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯ. ಇವೆಲ್ಲದರಿಂದ ತಲಾ ಆದಾಯ, ಜಿಡಿಪಿ ಬೆಳವಣಿಗೆ ಆಗ್ತದೆ. 
 
*ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆಯಿಂದ ಕೂಡಿದೆ. 
 
*ಹಿರಿಯ ಪೊಲೀಸ್ ಅಧಿಕಾರಿಗಳು ನಿಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಕೆಳಗಿನ‌ಅಧಿಕಾರಿಗಳು‌ ಇನ್ನಷ್ಡು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. 
 
*ಬೀಟ್ ವ್ಯವಸ್ಥೆ, ಸಂಚಾರ ವ್ಯವಸ್ಥೆ, ಹೈವೇ ಪ್ಯಾಟ್ರೋಲಿಂಗ್ ವ್ಯವಸ್ಥೆಯನ್ನು ತೀವ್ರ ಪರಿಣಾಮಕಾರಿಯಾಗಿ ನಿರ್ವಹಿಸಲು ಸಿಎಂ ಸೂಚನೆ. 
 
*ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಮತ್ತೊಂದು ಕೊಲೆಗಳು ನಡೆದವು. ಇಂಟೆಲಿಜೆಂಟ್ ಪೊಲೀಸರು ಎಚ್ಚರ ಇದ್ದಿದ್ದರೆ ಎರಡನೇ ಕೊಲೆ ತಪ್ಪಿಸಬಹುದಿತ್ತು. ಅದಕ್ಕೇ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಯಿತು.‌ ಇವರ ನಿರ್ಲಕ್ಷ್ಯದಿಂದ ಕೊಲೆ ಆಗಿದೆ. ಈ ಕೊಲೆ ತಪ್ಪಿಸಬಹುದಿತ್ತು. 
 
*ಜನರಿಗೆ ಪೊಲೀಸ್ ಬಳಿ ಹೋದರೆ ನ್ಯಾಯ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸ ಹೆಚ್ಚಾಗಬೇಕು.
 
*ಶಾಂತಿ ಸಭೆಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ನಿಯಮಿತವಾಗಿ ನಡೆಸಲೇಬೇಕು. 
 
*ವರ್ಗಾವಣೆಗೆ ಪ್ರಭಾವ ಬೀರುವವರ ವಿರುದ್ಧ, ಹಣ ಕೊಟ್ಟು ಟ್ರಾನ್ಸ್ ಫರ್ ಗೆ ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ. ನಿಮಗೆ ಸಮಸ್ಯೆಗಳಿದ್ದರೆ ಗೃಹ ಸಚಿವರಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿ ಸರಿಪಡಿಸಿಕೊಳ್ಳಿ. 
 
*ಕಾನೂನು ಮೀರಿ ಕೆಲಸ ಮಾಡಿ ಎಂದು ಸರ್ಕಾರ ಯಾವತ್ತೂ ಬಯಸಲ್ಲ. ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸರ್ಕಾರ ಸಹಿಸಲ್ಲ. 
 
*ಜನರ ನಡುವೆ ಪೊಲೀಸರು, ಅಧಿಕಾರಿಗಳು ಸಮವಸ್ತ್ರದಲ್ಲಿ ಹೆಚ್ಚೆಚ್ಚು ಕಾಣಿಸಬೇಕು. ಇದು ಜನ ಸಾಮಾನ್ಯರಿಗೆ ಧೈರ್ಯ ತಂದುಕೊಡುತ್ತದೆ. 
 
*ಪೊಲೀಸರು ಹೆಚ್ಚೆಚ್ಚು ಜನಸಂಪರ್ಕ ಸಭೆಗಳನ್ನು ಹೆಚ್ಚೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು. 
 
*DG-IGP ಯಿಂದ SP ಗಳವರೆಗೂ ಪ್ರತಿಯೊಬ್ಬರೂ ಠಾಣೆಗಳಿಗೆ ಭೇಟಿ ನೀಡಿ ಸರಿಯಾದ ಕ್ರಮದಲ್ಲಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮತ್ತೊಮ್ಮೆ ಒತ್ತಿ ಹೇಳಿ ಸಿಎಂ ಮಾತು ಮುಗಿಸಿದರು. 
 
ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಅವರುಗಳು ಉಪಸ್ಥಿತರಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ಮೀಕಿ ಹಗರಣದಲ್ಲಿ ಭಾಗಿಯಾದವರು ಎದೆ ಒಡ್ಕೊಂಡು ಸಾಯಲಿ