ಬೆಂಗಳೂರು: ವಕ್ಫ್ ಆಸ್ತಿ ಕಬಳಿಕೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರೇ ಶಾಮೀಲಾಗಿದ್ದಾರೆ ಎಂಬ ಸಂಶಯವಿದೆ ಎಂದು ಸಿಎಂ ಸಿದ್ದರಾಯ್ಯ ಆರೋಪ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ವಿವರಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರಿಗೆ ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿವೈ ವಿಜಯೇಂದ್ರ ತಮಗೆ 150 ಕೋಟಿ ರೂ. ಆಮಿಷವೊಡ್ಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೇ ವಿಜಯೇಂದ್ರ ನಮ್ಮ ಮನೆಗೆ ಬಂದು 150 ಕೋಟಿ ರೂ. ಆಫರ್ ನೀಡಿದ್ದರು ಎಂದು ಮಾಣಿಪ್ಪಾಡಿ ಹೇಳಿದ್ದಾರೆ. ಆಗ ನಾನು ವಿಜಯೇಂದ್ರರನ್ನು ಗದರಿಸಿ ಓಡಿಸಿದೆ ಎಂದಿದ್ದಾರೆ. ಇದನ್ನು ಮಾಣಿಪ್ಪಾಡಿಯವರೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಊರೆಲ್ಲಾ ನಾ ಖಾವೂಂಗ ಖಾನೆ ದೂಂಗಾ ಎಂದು ಡಂಗುರ ಹೊಡೆಯುವ ಮೋದಿ ಈ ಬಗ್ಗೆ ಮೌನವಹಿಸಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ಎಂದು ಸಿಎಂ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲೇ ಅತೀ ಹೆಚ್ಚು ವಕ್ಫ್ ನೋಟಿಸ್ ನೀಡಲಾಗಿತ್ತು ಎಂಬುದು ಮಾಧ್ಯಮಗಳಲ್ಲೇ ವರದಿಯಾಗಿದೆ. ಕೊವಿಡ್ ಸಲಕರಣೆಗಳಿಂದ ಹಿಡಿದು ವಕ್ಫ್ ಆಸ್ತಿ ಅಕ್ರಮದವರೆಗೆ ಬಿಜೆಪಿಯವರ ಭ್ರಷ್ಟಾಚಾರದ ಅಸ್ತಿಪಂಜರಗಳು ಒಂದೊಂದೇ ಉರುಳಿ ಬೀಳುತ್ತಿವೆ ಎಂದು ಸಿಎಂ ಟೀಕಿಸಿದ್ದಾರೆ.