ಸಿಎಂ ಬೊಮ್ಮಾಯಿ ಅವರಿಗೆ ತಮ್ಮ ಸಂಪುಟ ಮತ್ತು ಪಕ್ಷದ ಮೇಲೆ ನಿಯಂತ್ರಣವಿಲ್ಲ. ಸರ್ಕಾರವನ್ನೇ ಸಂಘ ಪರಿವಾರಕ್ಕೆ ಅಡವಿಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ʼಬೊಮ್ಮಾಯಿ ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರವನ್ನು ಸಂಘ ಪರಿವಾರಕ್ಕೆ ಹೊರ ಗುತ್ತಿಗೆಗೆ ನೀಡಿದ್ದಾರೆ. ಅಲ್ಲಿರುವ ಕೆಲವು ಪುಂಡರ ಕೈಗೆ ಅಧಿಕಾರ ನೀಡಿರುವಂತೆ ಕಾಣುತ್ತಿದೆ. ಸರ್ಕಾರವನ್ನು ಸಂಘ ಪರಿವಾರಕ್ಕೆ ಅಡವಿಟ್ಟರೆ ಕುರ್ಚಿ ಉಳಿಸಿಕೊಳ್ಳಬಹುದು ಎಂದು ಬೊಮ್ಮಾಯಿ ಕನಸು ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯದ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಇನ್ನೂ ಅಧಿಕಾರದಲ್ಲಿದ್ದರೆ, ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌರ್ಜನ್ಯ ಎಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು. ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.