ಹಿಜಬ್ ಸಂಘರ್ಷ ನಡೆಯುತ್ತಿರುವ ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ ಅವರು, ವಿದ್ಯಾರ್ಥಿಗಳು ಸಂಘರ್ಷಕ್ಕೆ ಇಳಿದಿರುವ ಕಡೆಗಳಲ್ಲಿ ಪುಂಡರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ಪಾಲಕರಲ್ಲಿ ಆತಂಕ ಹುಟ್ಟಿಸಿದೆ.
ಪ್ರಾರಂಭದ ಹಂತದಲ್ಲೇ ಸ್ಥಳೀಯವಾಗಿ ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ಸರಳ ಸಮಸ್ಯೆಯನ್ನು ರಾಜಕೀಯ ಕಾರಣಕ್ಕಾಗಿ ಉಲ್ಬಣಗೊಳಿಸಿರುವ ರಾಜ್ಯ ಸರ್ಕಾರ, ಇದೀಗ ನಿಯಂತ್ರಿಸಲಾಗದೆ ಕೈಚೆಲ್ಲಿ ಕೂತಿದೆ. ಸಮಸ್ಯೆ ಇತ್ಯರ್ಥಗೊಳಿಸುವ ಹೊಣೆಗಾರಿಕೆ ಹೊಂದಿರುವ ರಾಜ್ಯ ಶಿಕ್ಷಣ ಸಚಿವರು ಮತ್ತು ಗೃಹ ಸಚಿವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅರಿತು ಸಿಎಂ ಮಧ್ಯೆ ಪ್ರವೇಶಿಸಬೇಕು. ಶಾಲಾ-ಕಾಲೇಜುಗಳಿಗೆ ತಾತ್ಕಾಲಿಕವಾಗಿ ರಜೆ ಘೋಷಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಆನ್ಲೈನ್ ತರಗತಿ ಆರಂಭಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.