ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಬಿಜೆಪಿ ಶಾಸಕ ಸಿಟಿ ರವಿ ಅಶ್ಲೀಲ ಪದ ಬಳಸಿರುವುದು ನಿಜ ಎಂದು ಸಿಐಡಿ ತಂಡ ಖಚಿತಪಡಿಸಿದೆ. ಇದಕ್ಕೆ ಸಾಕ್ಷ್ಯವನ್ನೂ ಕಲೆ ಹಾಕಿದೆ.
ಘಟನೆ ಕುರಿತು ಅಸಲಿ ವಿಡಿಯೋವನ್ನು ಪರೀಕ್ಷಿಸಿದ ಬಳಿಕ ಸಿಐಡಿ ಪದ ಬಳಕೆ ಮಾಡಿರುವುದು ನಿಜ ಎಂದಿದೆ. ಘಟನೆ ಕುರಿತಂತೆ ಕೆಲವು ಶಾಸಕರಿಂದಲೂ ಮಾಹಿತಿ ಪಡೆಯಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ನಡೆದ ಘಟನೆ ಇದಾಗಿತ್ತು.
ಧ್ವನಿ ಪರೀಕ್ಷೆಗೆ ಸಿಟಿ ರವಿ ಸ್ಯಾಂಪಲ್ ನೀಡುವಂತೆ ಅಧಿಕಾರಿಗಳು ಕೇಳಿದ್ದರು. ಆದರೆ ಸಿಟಿ ರವಿ ಇದನ್ನು ನಿರಾಕರಿಸಿದ್ದರು. ಹೀಗಾಗಿ ಡಿಪಿಎಆರ್ ನಿಂದ ಅಸಲಿ ವಿಡಿಯೋವನ್ನು ಸಿಐಡಿ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿತ್ತು.
ಸದನದ ಕಲಾಪದ ವಿಡಿಯೋ ನೀಡುವಂತೆ ರಾಜ್ಯ ಆಡಳಿತ ಸುಧಾರಣೆ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ಸಿಐಡಿ ಮನವಿ ಮಾಡಿತ್ತು. ಅದರಂತೆ 4 ಗಂಟೆಗಳ ಕಲಾಪದ ವಿಡಿಯೋ ವಶಕ್ಕೆ ಪಡೆದುಕೊಂಡು ಪರೀಕ್ಷೆ ನಡೆಸಲಾಗಿದೆ. ಇದೀಗ ಸಿಟಿ ರವಿ ಅಂತಹ ಪದ ಬಳಕೆ ಮಾಡಿರುವುದು ನಿಜ ಎಂದು ಸಿಐಡಿ ಖಚಿತವಾಗಿ ಹೇಳಿದೆ.