ಮಂಗಳೂರು: ಪುತ್ತೂರು ಬಿಜೆಪಿ ಮುಖಂಡನ ಪುತ್ರ ಸಹಪಾಠಿ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ಪರಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆಯ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಪುತ್ತೂರಿನ ಬಿಜೆಪಿ ಮುಖಂಡ, ನಗರಸಭೆ ಸದಸ್ಯ ಜಗನ್ನಿವಾಸ ರಾವ್ ಪುತ್ರ ಕೃಷ್ಣ ಜೆ. ರಾವ್ (21) ಬಂಧಿತ ಆರೋಪಿ.
ಆರೋಪಿಯನ್ನು ಶುಕ್ರವಾರ ರಾತ್ರಿ ಮೈಸೂರಿನಲ್ಲಿ ವಶಕ್ಕೆ ಪಡೆದು, ಮಹಿಳಾ ಠಾಣೆಗೆ ಕರೆತರಲಾಗಿದೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:
'ಯುವತಿ ಬಳಿ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಸಹಪಾಠಿ ಯುವಕ, ನಾನು ಗರ್ಭಿಣಿ ಎಂದು ಗೊತ್ತಾದ ಮೇಲೆ ಮದುವೆಯಾಗಲು ನಿರಾರಿಸಿದ್ದು, ನ್ಯಾಯ ಒದಗಿಸಬೇಕು' ಎಂದು ಪುತ್ತೂರಿನ ಸಂತ್ರಸ್ತ ಯುವತಿ ಮಹಿಳಾ ಠಾಣೆಗೆ ಜೂನ್ 24ರಂದು ದೂರು ನೀಡಿದ್ದರು.
ಇನ್ನೂ ದೂರು ನೀಡಿದ ಬಳಿಕ ಜೂನ್ 27 ರಂದು ಈ ಯುವತಿ ಪುತ್ತೂರಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎಫ್ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ನಾಪತ್ತೆಯಾಗಿದ್ದ.
ಇದೀಗ ಆರೋಪಿಯನ್ನು ಮೈಸೂರಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.