ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಫೈನಲ್ ಆಗಿದೆ. ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರೇ ಅಭ್ಯರ್ಥಿ ಎನ್ನಲಾಗಿದೆ.
ಡಿಕೆ ಸುರೇಶ್ ಈ ಮೊದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಡಾ ಸಿಎನ್ ಮಂಜುನಾಥ್ ವಿರುದ್ಧ ಅದೇ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಿ ಸೋತಿದ್ದರು. ಇದಾದ ಬಳಿಕ ಈಗ ಡಿಕೆ ಸುರೇಶ್ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿಯಿತ್ತು.
ಅದರಂತೆ ಈಗ ತಮ್ಮ ಸಹೋದರನನ್ನು ಡಿಕೆಶಿ, ಚನ್ನಪಟ್ಟಣ ಉಪಚುನಾವಣೆಗೆ ನಿಲ್ಲಿಸಿ ರಾಜ್ಯ ರಾಜಕಾರಣಕ್ಕೆ ಕರೆತರಲಿದ್ದಾರೆ ಎಂಬ ಸುದ್ದಿಯಿದೆ. ಈ ಹಿಂದೆ ಡಿಕೆ ಶಿವಕುಮಾರ್ ತಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ ಎಂದಿದ್ದರು. ಆದರೆ ಈಗ ಡಿಕೆ ಸುರೇಶ್ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿಯಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ.
ಚನ್ನಪಟ್ಟಣ ಉಪಚುನಾವಣೆ ಬಿಜೆಪಿ-ಜೆಡಿಎಸ್ ಮತ್ತು ಕಾಂಗ್ರೆಸ್ ಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಎರಡೂ ಪಕ್ಷಗಳೂ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಪಣ ತೊಟ್ಟಿವೆ. ಚನ್ನಪಟ್ಟಣವನ್ನು ಹೇಗಾದರೂ ಜೆಡಿಎಸ್ ಹಿಡಿತದಿಂದ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಡಿಕೆ ಶಿವಕುಮಾರ್ ತಮ್ಮ ಸಹೋದರನನ್ನೇ ಪಣಕ್ಕಿಟ್ಟಿದ್ದಾರೆ ಎನ್ನಬಹುದು.