Publish Date: Mon, 16 Sep 2024 (16:22 IST)
Updated Date: Mon, 16 Sep 2024 (16:26 IST)
ಬೆಂಗಳೂರು: ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಲ್ಲಿ ಪೊಲೀಸ್ ವಶದಲ್ಲಿರುವ ಶಾಸಕ ಮುನಿರತ್ನ ವಿರುದ್ಧ ಗುತ್ತಿಗೆದಾರ ಚಲುವರಾಜು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ಮುನಿರತ್ನ ಅವರ ಕುರಿತ ಇನ್ನೂ ಎರಡು ಆಡಿಯೋ ನನ್ನ ಬಳಿಯಿದೆ. ಅದನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಚಲುವರಾಜು ಅವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿಯಾಗಿ ಮಾತನಾಡಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಚಲುವರಾಜು ಅವರು ರಾಜರಾಜೇಶ್ವರಿನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ ಜತೆ ಮಾತಾಡಿದ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋ ನನ್ನಲಿದೆ. ಅದನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಬಿಜೆಪಿ ಶಾಸಕರ ನಿಂದನೆ ಮಾತುಗಳಿಂದ ನೊಂದಿರುವ ಚಲುವರಾಜು ಹಾಗೂ ಅವರ ಕುಟುಂಬಕ್ಕೆ ಧೈರ್ಯ ತುಂಬಿದ್ದು, ಸರ್ಕಾರದಿಂದ ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವುದಾಗಿ ಹೇಳಿದರು.