Select Your Language

Notifications

webdunia
webdunia
webdunia
webdunia

ಗಾಂಧೀಜಿ ಹೇಳಿದರೂ ನೀವ್ಯಾಕೆ ಕಾಂಗ್ರೆಸ್ ಹೆಸರು ಬದಲಾಯಿಸಲಿಲ್ಲ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy
ಬೆಂಗಳೂರು: 1948ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ವಿಸರ್ಜನೆ ಮಾಡಲು ಹೇಳಿದ್ದರು. ಕಾಂಗ್ರೆಸ್ ಹೆಸರು ಬದಲಿಸಿ ಲೋಕ ಸೇವಕ ಸಂಘ ಎಂಬ ಹೆಸರು ಇಡಲು, ಮಹಿಳೆಯರು, ಹರಿಜನರು, ಗೋವುಗಳ ರಕ್ಷಣೆಗೆ ನಿಲ್ಲಲು ಹೇಳಿದ್ದರಲ್ಲವೇ? ಈಗ ನಿಮ್ಮ ತಂದೆಯವರೇ ಎಐಸಿಸಿ ಅಧ್ಯಕ್ಷರಿದ್ದಾರೆ. ಮಹಾತ್ಮ ಗಾಂಧಿಯವರ ಆಶಯಕ್ಕೆ ಅನುಗುಣವಾಗಿ ಕಾಂಗ್ರೆಸ್ಸನ್ನು ವಿಸರ್ಜಿಸುವುದು ಯಾವಾಗ ಎಂದು ಯಾಕೆ ಇನ್ನೂ ನೀವು ಪತ್ರ ಬರೆದಿಲ್ಲ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆಯವರನ್ನು ಪ್ರಶ್ನಿಸಿದ್ದಾರೆ.

ಇಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಮೋಹನ್ ಭಾಗವತ್ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಅವರಿಗೆ ಉತ್ತರ ಸಿಕ್ಕಿದೆ ಎಂದುಕೊಳ್ಳುವೆ. ಪ್ರಶ್ನೆ ಕೇಳಿದ ಕಾಂಗ್ರೆಸ್ಸಿನವರು ಗಾಂಪರ ದೊರೆಗಳಾಗಿದ್ದರು ಎಂದು ನುಡಿದರು. ಮೋಹನ್ ಭಾಗವತ್ ಅವರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ದೇಶದ ಕಾನೂನು ಒಂದೇ ಎನ್ನುವಿರಲ್ಲವೇ? ಹಾಗಿದ್ದರೆ ನೀವು ಕಾನೂನಿನ ಮೊರೆ ಯಾಕೆ ಹೋಗಿಲ್ಲ ಎಂದು ಕೇಳಿದರು. ಆರೆಸ್ಸೆಸ್ ಕುರಿತು ಪ್ರಶ್ನಿಸಿದ ಗಾಂಪರ ದೊರೆಗಳ ಪಟ್ಟಿಗೆ ಪ್ರಿಯಾಂಕ್ ಖರ್ಗೆಯವರೂ ಸೇರಿಕೊಂಡಿದ್ದಾರೆ ಎಂದು ತಿಳಿಸಿದರು.

ಮೀಡಿಯ- ಪತ್ರಿಕೆಗಳಲ್ಲಿ ಪ್ರಮುಖವಾಗಿ ಪ್ರಕಟಗೊಂಡು ನನ್ನನ್ನು ಮೇಧಾವಿ ಎಂದು ಜನರು ಅಂದುಕೊಳ್ಳಬೇಕು. ಇಷ್ಟೇನಾ ನಿಮ್ಮದು ಎಂದು ಪ್ರಶ್ನಿಸಿದರು. ಎಲ್ಲಕ್ಕಿಂತ ಮಿಗಿಲಾಗಿ ನೀವು ಪರಿಶಿಷ್ಟ ಜಾತಿ, ವರ್ಗದಿಂದ ಬಂದ ವ್ಯಕ್ತಿ. ತಳ ಸಮುದಾಯಗಳಿಗೆ ನ್ಯಾಯ ಕೊಟ್ಟು, ಅನ್ಯಾಯ ಸರಿಪಡಿಸಬೇಕೆಂದು ಬಾಬಾಸಾಹೇಬ ಅಂಬೇಡ್ಕರರು ದೊಡ್ಡ ಹೋರಾಟ ಮಾಡಿದ್ದರು. ಅಲ್ಲದೇ ಆ ಜನರ ಸಮಸ್ಯೆಗೆ ಪರಿಹಾರ ಕೊಡಲಿ ಎಂದು ಮೀಸಲಾತಿಯನ್ನು ಕೊಡಿಸಿದರು. ಈಗ ಆರೆಸ್ಸೆಸ್‍ನಿಂದ ಯಾವ ದಲಿತರಿಗೆ ಅನ್ಯಾಯವಾಗಿದೆ ಎಂದು ಪ್ರಶ್ನೆ ಮಾಡಿದರು. ಆರೆಸ್ಸೆಸ್ ಅನ್ನು ಇದೆಲ್ಲ ಕೇಳುವಾಗ ದಲಿತರಿಗೆ ಆಗುವ ಒಳಿತೇನು ಎಂದು ಕೇಳಿದರು. 

ಇವತ್ತು ದಲಿತರಿಗೆ ಅನೇಕ ರೀತಿಯ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸರಕಾರದಿಂದ, ನಿಮ್ಮಿಂದಲೂ ಅನ್ಯಾಯ ಆಗುತ್ತಿದೆ. ಎಸ್‍ಇಪಿ, ಟಿಎಸ್‍ಪಿ ಹಣ ಆ ಜನಾಂಗಗಳಿಗೆ ತಲುಪುತ್ತಿಲ್ಲ. ಅದನ್ನು ಗ್ಯಾರಂಟಿಗಳಿಗೆ ಬಳಸಿದ್ದನ್ನು ನೀವೇ ಸ್ವತಃ ನಿಂತು ಸಮರ್ಥಿಸಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದನ್ನು ಅಭಿವೃದ್ಧಿಗೆ ಕೊಡಿ ಎಂದು ನೀವ್ಯಾಕೆ ಕೇಳಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ನಿಮಗೆ ತಾಕತ್ತಿಲ್ಲವೇ ಎಂದರು.
 
 
ಮೀಸಲಾತಿ ಗೊಂದಲದಿಂದ ಜನರಿಗೆ ಅನ್ಯಾಯ ಆಗುತ್ತಿದೆ. ಎಲ್ಲೆಡೆ ಕೊಲೆ, ಸುಲಿಗೆ ಆಗುತ್ತಿದೆ. ದಲಿತರ ಮೇಲೆ ಅತ್ಯಾಚಾರಗಳಾಗುತ್ತಿದೆ. ನೀವು ಸಚಿವರಾದ ಬಳಿಕ ಹುಬ್ಬಳ್ಳಿ- ಧಾರವಾಡದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಒಬ್ಬ ಹೆಣ್ಮಗಳು ತೀರಿಕೊಂಡಿದ್ದಾರೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಕೆಟ್ಟಿದೆ. ಇದರ ಬಗ್ಗೆ ನಿಮ್ಮ ಉತ್ತರ ಏನು ಎಂದು ಕೇಳಿದರು. ನೀವು ಪರಿಶಿಷ್ಟ ಜಾತಿ, ವರ್ಗಗಳ ಕೋಟಾದಡಿ ಸಚಿವರಾದುದು ದಲಿತರ ಸಮಸ್ಯೆ ಪರಿಹಾರಕ್ಕೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು.

ಅನೇಕರನ್ನು ತುಳಿದ ನಿಮ್ಮನ್ನು ಸಚಿವರನ್ನಾಗಿ ನಿಮ್ಮ ತಂದೆಯವರು ಕೂರಿಸಿದ್ದಾರಲ್ಲವೇ? ಅದಕ್ಕಾದರೂ ದಲಿತರ ಸಮಸ್ಯೆ ಪರಿಹರಿಸಲು ನಿಮಗೆ ಕೃತಜ್ಞತೆ ಬೇಡವೇ? ಇಲ್ಲದ ವಿಚಾರಗಳನ್ನು ತೆಗೆದುಕೊಂಡು ನೀವು ದಲಿತರಿಗೆ ಯಾಕೆ ಅನ್ಯಾಯ ಮಾಡುತ್ತಿದ್ದೀರಿ? ಎಂದು ಕೇಳಿದರು. ರಾಜೀನಾಮೆ ಕೊಟ್ಟು ಬೇರೆ ನಿಮ್ಮ ಹೋರಾಟ ಮಾಡಿ ಎಂದು ಸವಾಲು ಹಾಕಿದರು. ನಾನು ಆರೆಸ್ಸೆಸ್ ವಕ್ತಾರನಲ್ಲ; ನನಗೆ ಅದರ ಬಗ್ಗೆ ಮಾತನಾಡುವ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು.
 
ಇದಕ್ಕಿಂತ ಮಿಗಿಲಾದ ಅನೇಕ ಸಮಸ್ಯೆಗಳಿವೆ. ಅವು ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ನಿಮ್ಮಿಂದಾಗಿ ದಲಿತರು ಸರ್ವನಾಶ ಆಗುತ್ತಿದ್ದಾರೆ; ಆಗಿ ಹೋಗಿದ್ದಾರೆ ಎಂದು ಅನೇಕ ಬಾರಿ ಹೇಳಿದ್ದೇನೆ. ಇಡೀ ಕಲ್ಯಾಣ ಕರ್ನಾಟಕದಲ್ಲಿ  ನಿಮ್ಮ ಉಪಟಳದಿಂದ ಒಬ್ಬ ನಾಯಕ ಮೇಲೆ ಬಂದಿಲ್ಲ ಎಂದು ತಿಳಿಸಿದರು. ಎಂತೆಂಥ ನಾಯಕರನ್ನು ನೀವು ತುಳಿದಿದ್ದೀರೆಂದು ಕರ್ನಾಟಕಕ್ಕೆ ಗೊತ್ತಿದೆ ಎಂದು ಹೇಳಿದರು.

ಬಸವಲಿಂಗಪ್ಪನವರ ಗತಿ ಏನಾಯಿತು? ಶ್ರೀನಿವಾಸಪ್ರಸಾದ್ ಅವರ ಗತಿ ಏನಾಯಿತು? ನೀವು ಮಂತ್ರಿ ಆದುದು ಯಾರ ಸ್ಥಾನದಲ್ಲಿ? 3 ಸಾರಿ ನಿಂತು ಗೆದ್ದು ಮೂರು ಸಾರಿಯೂ ಮಂತ್ರಿ ಆಗಿದ್ದೀರಿ. ಅದೇ ದಲಿತರು ಅನೇಕರು ಇದ್ದಾರಲ್ಲವೇ? ಯಾರ್ಯಾರು ಆದರು? ನೀವು ಆದುದಕ್ಕೆ ನಮಗೇನೂ ಬೇಸರ ಇಲ್ಲ. ಅವರನ್ನೆಲ್ಲ ತುಳಿದು ಹಾಕಿದ್ದೀರಲ್ಲವೇ? ಎಂದರು. ದಲಿತರ ಸಮಸ್ಯೆ ತೆಗೆದುಕೊಂಡು ಹೋರಾಟ ಮಾಡಿದರೆ ನಾವು ಮೆಚ್ಚುಗೆ ಸೂಚಿಸುತ್ತೇವೆ ಎಂದು ತಿಳಿಸಿದರು.

ಬೇರೆ ಬೇರೆ ಚಟುವಟಿಕೆ ಮಾಡುವ ರಾಷ್ಟ್ರೋತ್ಥಾನ ಪರಿಷತ್ ಸೇರಿ 2200 ಸಂಘಟನೆಗಳು ನೋಂದಾವಣೆಗೊಂಡಿವೆ. ದಲಿತರನ್ನು ಒಗ್ಗೂಡಿಸುವ, ಜಾತಿಯನ್ನು ತೊಡೆದುಹಾಕುವ, ದೇವಸ್ಥಾನದಲ್ಲಿ ಬಿಡದಿದ್ದರೆ ಒಳಕ್ಕೆ ಬಿಡಿಸುವ ಚಟುವಟಿಕೆ ಮಾಡುತ್ತಿದೆ. ಆರೆಸ್ಸೆಸ್‍ನಲ್ಲಿ ಸದಸ್ಯತ್ವ ಇಲ್ಲ; ವ್ಯವಹಾರವೂ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
 

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್: ರೋಚಕ ವಿಡಿಯೋ ಇಲ್ಲಿದೆ