Select Your Language

Notifications

webdunia
webdunia
webdunia
webdunia

ಸಂವಾದದಲ್ಲಿ ಸೋತರೆ ರಾಜಕೀಯ ನಿವೃತ್ತಿ: ಸಿಎಂಗೆ ಸವಾಲು ಹಾಕಿದ ಛಲವಾದಿ ನಾರಾಯಣಸ್ವಾಮಿ

Chalavadi Narayanaswamy
ಬಾಗಲಕೋಟೆ: ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಮಾಡಿದ ಅನ್ಯಾಯಗಳನ್ನು ಸಂವಾದ ಮೂಲಕ ಚರ್ಚಿಸೋಣ. ಸಿದ್ದರಾಮಯ್ಯನವರು ನನ್ನ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾಗದಿದ್ದರೆ ಇಲ್ಲೇ ನೀವೂ ಶರಣಾಗಿ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯವನ್ನು ಸಂಪೂರ್ಣವಾಗಿ ಅಭಿವೃದ್ಧಿ ಶೂನ್ಯವಾಗಿ ಮಾಡಿದೆ ಎಂದು ಆರೋಪಿಸಿದರು.
 
ಇಡೀ ಪ್ರಪಂಚ ಭಾರತವನ್ನು ಹೊಗಳುತ್ತಿದೆ. ಇವರು ಮಾತ್ರ ಸರೆಂಡರ್ ಮೋದಿ ಎನ್ನುತ್ತಾರೆ ಎಂದು ಟೀಕಿಸಿದರು. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು. ಅವರೆಲ್ಲಿ ಸರೆಂಡರ್ ಆಗಿದ್ದಾರೆ? ಮೋದಿಯವರು ಧುರಂದರ್ ಮೋದಿ ಎಂದು ಶ್ಲಾಘಿಸಿದರು. ಅವರು ಕಷ್ಟಕಾಲದಲ್ಲೂ ಸಮಸ್ಯೆಗಳನ್ನು ನಿಭಾಯಿಸಬಲ್ಲವರು ಎಂದು ವಿಶ್ಲೇಷಿಸಿದರು. ಕಾಂಗ್ರೆಸ್ ದೇಶದ ಆಡಳಿತ ಮಾಡುತ್ತಿದ್ದರೆ ಪಾಕಿಸ್ತಾನದಲ್ಲಿರುವ ಭಿಕ್ಷೆ ಬೇಡುವಂಥ ಪರಿಸ್ಥಿತಿ ಭಾರತಕ್ಕೂ ಬರುತ್ತಿತ್ತು ಎಂದು ನುಡಿದರು.
ಬಾಗಲಕೋಟೆ, ದಾವಣಗೆರೆ ದಕ್ಷಿಣ ಇವೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ನಿಲ್ಲುತ್ತದೆಯೇ? ನಿಲ್ಲಿಸಲು ಸಾಧ್ಯವೇ ಎಂದು ಕೇಳಿದರು. ಮುಖ್ಯಮಂತ್ರಿ ಮತ್ತು ಅವರ ಸಹೋದ್ಯೋಗಿಗಳು, ಕಾಂಗ್ರೆಸ್ ಮುಖಂಡರು ಧಮ್ಕಿ ರಾಜಕೀಯ ಪ್ರಾರಂಭಿಸಿದ್ದಾರೆ ಎಂದು ಟೀಕಿಸಿದರು.
ಇಲ್ಲಿ ಸೋತರೆ ಎರಡೇ ಕ್ಷೇತ್ರಕ್ಕೆ ಗ್ಯಾರಂಟಿ ನಿಲ್ಲಿಸುವಿರಾ? ಇಡೀ ರಾಜ್ಯಕ್ಕೆ ನಿಲ್ಲಿಸುತ್ತೀರಾ ಎಂಬುದಾಗಿ ಹೇಳಿ ಎಂದು ಸವಾಲೆಸೆದರು. ಮುಖ್ಯಮಂತ್ರಿಗಳು ಸೋಲಿನ ಭೀತಿಯಿಂದ, ಸರಕಾರಕ್ಕೆ ಆಪತ್ತು ಬರುವುದೋ, ಸೋತರೆ ಡಿ.ಕೆ.ಶಿವಕುಮಾರ್ ಎಲ್ಲಿ ಮುಖ್ಯಮಂತ್ರಿ ಆಗುವರೋ ಎಂಬ ಭೀತಿಯಿಂದ 5 ದಿನ ಇಲ್ಲಿ ಸಿದ್ದರಾಮಯ್ಯನವರು ಠಿಕಾಣಿ ಹೂಡುತ್ತಿದ್ದಾರೆ ಎಂದು ಆರೋಪಿಸಿದರು.

ಎರಡೂ ಕ್ಷೇತ್ರಗಳಲ್ಲಿ ಸರಕಾರದ ಆಡಳಿತ ಯಂತ್ರ ದುರುಪಯೋಗ ಮಾಡುತ್ತಿದ್ದಾರೆ. ಶಿಕ್ಷಕರು, ಬೇರೆ ಬೇರೆ ಇಲಾಖೆಯವರನ್ನು ಬಳಸಿಕೊಳ್ಳುತ್ತಿದ್ದಾರೆಂದು ಪತ್ರಿಕೆಗಳಲ್ಲಿ ನಮೂದಾಗಿದೆ ಎಂದರು. ಆಶ್ವಾಸನೆ ನೀಡಿದಂತೆ ಅಂಗನವಾಡಿಯವರ, ಆಶಾ ಕಾರ್ಯಕರ್ತೆಯರ ವೇತನ, ಸೌಕರ್ಯ ಹೆಚ್ಚಿಸಿಲ್ಲ. ಆಸ್ಪತ್ರೆಯ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಸೌಕರ್ಯ ಹೆಚ್ಚಾಗಿಲ್ಲವೆಂದು ಅವರು ಹೋರಾಟ ಮಾಡುತ್ತಲೇ ಇದ್ದಾರೆ ಎಂದು ಗಮನ ಸೆಳೆದರು.
 
ಎಸ್‍ಸಿ, ಎಸ್‍ಟಿ ವಿಚಾರದಲ್ಲಿ ಮುಖ್ಯಮಂತ್ರಿಗಳದು ಒಂದು ಕಡೆ ಘೋಷಣೆ, ಮತ್ತೊಂದು ಕಡೆ ಶೋಷಣೆ ಎಂದು ಟೀಕಿಸಿದರು. 42 ಸಾವಿರ ಕೋಟಿ ಎಸ್‍ಇಪಿ, ಟಿಎಸ್‍ಪಿ ಹಣ ಇಟ್ಟದ್ದನ್ನು ಹೇಳಿಕೊಂಡರು. ಅದರಲ್ಲಿ 21 ಸಾವಿರ ಕೋಟಿ ಎಲ್ಲ ಅನ್ಯ ಇಲಾಖೆಗಳಿಗೆ ಹಂಚಿದರು. ಉಳಿದ ಮೊತ್ತದಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ತೆಗೆದಿದ್ದಾರೆ. ಉಳಿದುದು 7 ಸಾವಿರ ಕೋಟಿಯನ್ನು ಸಮಾಜ ಕಲ್ಯಾಣಕ್ಕೆ ಕೊಟ್ಟಿದ್ದಾರೆ. ಉಳಿದುದೆಲ್ಲ ಬೋಗಸ್, ಸುಳ್ಳು ವಂಚನೆ ಎಂದರು. ಅದರಲ್ಲೂ ಹಣವನ್ನು ಸಂವಿಧಾನ ದಿನಾಚರಣೆ, ಪ್ರಜಾಪ್ರಭುತ್ವ ದಿನಾಚರಣೆಗೆ ಬಳಸುತ್ತಾರೆ ಎಂದು ಟೀಕಿಸಿದರು. ಎಸ್‍ಸಿ, ಎಸ್‍ಟಿ ನಿಗಮಕ್ಕೆ 500 ಕೋಟಿ ಘೋಷಿಸಿ 200 ಕೋಟಿಯೂ ಬಿಡುಗಡೆ ಮಾಡಿಲ್ಲ ಎಂದು ಆಕ್ಷೇಪಿಸಿದರು. ಅಲ್ಲಿ ಕಾರ್ಯಯೋಜನೆಗಳೇ ಇಲ್ಲ. ಆಸ್ತಿ ಮಾಡಲು ಹಣ ಬಿಡುಗಡೆ ಮಾಡದೇ ದಲಿತರು ಕಂಗಾಲಾಗಿದ್ದಾರೆ ಎಂದು ದೂರಿದರು.
 
ದಾವಣಗೆರೆ ದಕ್ಷಿಣದಲ್ಲಿ ಒಂದೇ ಮನೆಗೆ ಅಧಿಕಾರ. ಮುಸಲ್ಮಾನರು ನಾವು ಸ್ವಾಭಿಮಾನಿಗಳೆಂದು ಹೊರಟಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಲು ಅವರೂ ಶಪಥ ಮಾಡಿದ್ದಾರೆ. ದಲಿತರೂ ಶಪಥ ಮಾಡಿದ್ದಾರೆ ಎಂದ ಅವರು, ಖಜಾನೆ ಖಾಲಿ ಇರುವ ಕಾರಣ 2 ಲಕ್ಷ 84 ಸಾವಿರ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು. ನಿಜವಾಗಿ 4 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದರು. ರಾಜ್ಯ ಸರಕಾರವು ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿಲ್ಲ ಎಂದು ಟೀಕಿಸಿದರು.
ಒಳ ಮೀಸಲಾತಿಯಲ್ಲೂ ಅನ್ಯಾಯ ಮಾಡುತ್ತಿದ್ದಾರೆ. ನಮ್ಮೊಳಗೆ ಜಗಳ ಹಚ್ಚಲು ಸರಕಾರ ಮುಂದಾಗಿದೆ ಎಂದು ಆಕ್ಷೇಪಿಸಿದರು. ಬಿಜೆಪಿ ಯಾವತ್ತೂ ದಲಿತರ ಪರ ಇದೆ. ಬಾಬಾ ಸಾಹೇಬ ಅಂಬೇಡ್ಕರರಿಗೆ ಗೌರವ ಕೊಡುತ್ತದೆ ಎಂದು ತಿಳಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ವಿರುದ್ಧ ಸೇಡಿಗಾಗಿ ಎಸ್ಸೆಸ್ಸೆಲ್ಸಿಯಲ್ಲಿ ಗ್ರೇಡಿಂಗ್ ವ್ಯವಸ್ಥೆ: ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ