ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಸೂಸೂತ್ರವಾಗಿ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆಯಿಂದ ರಾಜ್ಯಾದ್ಯಂತ 486 ಕೇಂದ್ರಗಳಲ್ಲಿ ಮೂರು ದಿನಗಳ ಸಿಇಟಿ ಪರೀಕ್ಷೆ ನಡೆಯಲಿದೆ ಎಂದರು.
ನಾಳೆ ಅಂದರೆ ಜೂನ್ 16ರಂದು ಬೆಳಿಗ್ಗೆ 10.30ಕ್ಕೆ ಜೀವಶಾಸ್ತ್ರ ಪರೀಕ್ಷೆ, ಮಧ್ಯಾಹ್ನ 2.30ಕ್ಕೆ ಗಣಿತ, 17ರಂದು ಬೆಳಿಗ್ಗೆ 10.30ಕ್ಕೆ ಭೌತಶಾಸ್ತ್ರ, ಮಧ್ಯಾಹ್ನ 2.30ಕ್ಕೆ ರಸಾಯನ ಶಾಸ್ತ್ರ, 18ರಂದು 11.30ಕ್ಕೆ ಕನ್ನಡ ಭಾಷಾ ಪರೀಕ್ಷೆಗಳು ನಡೆಯಲಿವೆ.
ರಾಜ್ಯದ 486 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಒಟ್ಟಾರೆ 2,16,526 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 87 ಪರೀಕ್ಷಾ ಕೇಂದ್ರಗಳು ಇದ್ದರೆ, ವಿವಿಧ ಜಿಲ್ಲೆಗಳಲ್ಲಿ 399 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ 6 ಕೇಂದ್ರಗಳಲ್ಲಿ ಕನ್ನಡ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು.