ನವದೆಹಲಿ: ಇಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025 ರನ್ನು ಮಂಡಿಸಲಿದ್ದಾರೆ. ಈ ಬಜೆಟ್ ನಲ್ಲಿ ಕರ್ನಾಟಕದ ಬೇಡಿಕೆಗಳು ಮತ್ತು ನಿರೀಕ್ಷೆಗಳೇನು ಇಲ್ಲಿದೆ ವಿವರ.
ಕೇಂದ್ರ ಬಜೆಟ್ 2025 ರ ಮೇಲೆ ರಾಜ್ಯದ ನಿರೀಕ್ಷೆಗಳು ಬೆಟ್ಟದಷ್ಟಿವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕೇಂದ್ರ ವಿತ್ತ ಸಚಿವರಿಗೆ ತಮ್ಮ ಬೇಡಿಕೆಗಳ ಪಟ್ಟಿ ಮುಂದಿಟ್ಟಿದ್ದಾರೆ. ಕರ್ನಾಟಕದ ಪರವಾಗಿ ಸಿಎಂ ಯಾವೆಲ್ಲಾ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ ನೋಡಿ.
ಬೇಡಿಕೆಗಳ ಪಟ್ಟಿ
15 ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯವರೆಗೆ ಆಯೋಗವೇ ಶಿಫಾರಸ್ಸು ಮಾಡಿರುವ ವಿಶೇಷ ಅನುದಾನ ರೂ. 5495 ಕೋಟಿ ಮತ್ತು ರಾಜ್ಯ ಕೇಂದ್ರಿತ ರೂ. 6000 ಕೋಟಿ ಮೊತ್ತದ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ.
ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ವಸೂಲು ಮಾಡುತ್ತಿರುವ ಸೆಸ್ ಮತ್ತು ಸರ್ಚಾರ್ಜ್ ಗಳಲ್ಲಿ ರಾಜ್ಯಗಳಿಗೆ ಪಾಲು ನೀಡಿಲ್ಲ.
ಜಿಎಸ್ ಟಿ ಅನುಷ್ಠಾನದಿಂದಾಗಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಜಿಎಸ್ ಟಿ ಪರಿಹಾರ ಸೆಸ್ ಜಾರಿಗೊಳಿಸಲಾಗಿತ್ತು. 2022 ರ ಜುಲೈ ತಿಂಗಳಲ್ಲಿಯೇ ಪರಿಹಾರ ನೀಡುವುದನ್ನು ನಿಲ್ಲಿಸಿದರೂ ಸೆಸ್ ಸಂಗ್ರಹ 2026 ರವರೆಗೆ ಮುಂದುವರಿಸಲಾಗಿದೆ.
1985 ರಿಂದ ಸೇವಾ ತೆರಿಗೆ ಪರಿಷ್ಕರಿಸಿಲ್ಲ. ಆದರೆ ತೆರಿಗೆ ಹಂಚಿಕೆಯಲ್ಲಿ ಸಿಗುವ ಪಾಲಿನ ಆಧಾರದಲ್ಲಿಯೇ ಈ ವಿಶೇಷ ನೆರವು ನೀಡುತ್ತಿರುವ ಕಾರಣ ಕರ್ನಾಟಕಕ್ಕೆ ಅತೀ ಕಡಿಮೆ ನೆರವು ಸಿಗುತ್ತಿದೆ.
ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವುದು ರೂ.2,461.49 ಕೋಟಿ ರೂ. ಹಣವನ್ನು ಬಾಕಿ ಇರಿಸಿರುವುದರಿಂದಾಗಿ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಹಣ ಬಿಡುಗಡೆಮಾಡಬೇಕಿದೆ.
ಅಂಗನಾಡಿ ಮತ್ತು ಆಶಾ ಕಾರ್ಯಕರ್ತರ ಗೌರವಧನ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಾಗಿ ಕೇಂದ್ರ ನೀಡುತ್ತಿರುವ ಹಣ ಹೆಚ್ಚಿಸಬೇಕು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿಯೊಂದು ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನದ ಪಾಲು ಹೆಚ್ಚಿಸಬೇಕು.
ರೈಲ್ವೇ ಯೋಜನೆಗಳು ಸಂವಿಧಾನದ ಏಳನೇ ಪರಿಚ್ಛೇದದಲ್ಲಿ ಕೇಂದ್ರ ಪಟ್ಟಿಯಲ್ಲಿದ್ದರೂ ಅವುಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.
ಇತ್ಯಾದಿ ಹಲವು ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಕೇಂದ್ರ ಮುಂದಿಟ್ಟಿದ್ದು ಇದರಲ್ಲಿ ಯಾವೆಲ್ಲಾ ಬೇಡಿಕೆಗಳು ಈಡೇರುತ್ತವೆ ನೋಡಬೇಕಿದೆ.