CBIಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇರುತ್ತವೆ. ಅವುಗಳನ್ನು ಮೊದಲು ಮಾಡುವಂತೆ ತಾನು ಸಿಬಿಐಗೆ ಸಲಹೆ ನೀಡುವುದಾಗಿ ಶಿವಮೊಗ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಸಚಿವರು, ತನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿರುವ ವಿಚಾರ ಪ್ರಸ್ತಾಪಿಸುತ್ತಾ ಈ ಮೇಲಿನ ಮಾತುಗಳನ್ನು ಹೇಳಿದರು. ನನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿದೆ. ಆಕೆಯ ಶಿಕ್ಷಣ ಶುಲ್ಕದ ಬಗ್ಗೆ ಅವರಿಗೆ ಮಾಹಿತಿ ಬೇಕಂತೆ. ಈ CBIನವರಿಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇವೆ. ಆ ದೊಡ್ಡ ಕೆಲಸಗಳನ್ನು ಮಾಡುವಂತೆ ಸಿಬಿಐಗೆ ಸಲಹೆ ನೀಡಿ ಪತ್ರ ಬರೆಯುತ್ತೇನೆ ಎಂದು ಡಿಕೆಶಿ ತಿಳಿಸಿದರು. ಇದೇ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕೇಂದ್ರ ಸರ್ಕಾರ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು. ಇದೇ ವೇಳೆ, ತನಗೆ ಜಾರಿ ನಿರ್ದೇಶನಾಲಯದಿಂದ ನೋಟೀಸ್ ಬಂದಿರುವ ವಿಚಾರವನ್ನೂ ಅವರು ಖಚಿತಪಡಿಸಿದರು. ಇಡಿ ನೋಟೀಸ್ ಬಂದಿದೆ. ಫೆಬ್ರವರಿ 22ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.