ಬೆಂಗಳೂರು: ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಋತು ಚಕ್ರ ರಜೆ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ರಾಜ್ಯದಲ್ಲಿರುವ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ಋತು ಚಕ್ರ ರಜೆ ನೀತಿ 2025 ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ವಿಚಾರವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಋತುಚಕ್ರದ ಆರೋಗ್ಯವನ್ನು ಮಹಿಳೆಯರ ಹಕ್ಕುಗಳು ಮತ್ತು ಕೆಲಸದ ಸ್ಥಳದ ಕಲ್ಯಾಣದ ಮೂಲಭೂತ ಅಂಶವೆಂದು ಪರಿಗಣಿಸಿ ಅದರ ಮಹತ್ವವನ್ನು ಗುರುತಿಸಿದೆ.
ಋತುಚಕ್ರ ರಜೆ ನೀತಿಯು ಮಹಿಳೆಯರು ಯಾವುದೇ ಕಳಂಕ ಅಥವಾ ಪರಿಣಾಮಗಳ ಭಯವಿಲ್ಲದೆ ತಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ಈ ತೀರ್ಮಾಣವನ್ನು ಕೈಗೊಳ್ಳಲಾಗಿದೆ.
ಋತುಚಕ್ರ ರಜೆಗೆ ದೇಶದಲ್ಲಿ ನಿರ್ದಿಷ್ಟವಾಗಿ ಯಾವುದೇ ಶಾಸನವಿಲ್ಲದಿದ್ದರೂ ಹಲವಾರು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ನೀಡುವ ನೀತಿಗಳನ್ನು ಅಳವಡಿಸಿಕೊಂಡಿವೆ ಎಂದರು.