ಬೆಂಗಳೂರು: ಯಾವ ಪುರುಷಾರ್ಥಕ್ಕೆ ನೀವು ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಮುಖ್ಯಮಂತ್ರಿಗಳೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರ, ಮುಖ್ಯಮಂತ್ರಿಗಳು ನಾಳೆ ಎರಡು ವರ್ಷಗಳ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದರು. ನಿರಂತರವಾಗಿ ಬೆಲೆ ಏರಿಕೆ ಮಾಡುತ್ತ ಬಂದಿದ್ದೀರಿ. ರಾಜ್ಯದಲ್ಲಿ ಭ್ರಷ್ಟಾಚಾರ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಸತತವಾಗಿ ನಡೆಯುತ್ತಿದೆ ಎಂದು ಟೀಕಿಸಿದರು.
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರಕ್ಕೆ ರೈತರಿಗೆ ಯಾವುದೇ ಹೊಸ ಯೋಜನೆ ನೀಡಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಯಾವುದೇ ಅಭಿವೃದ್ಧಿ ಯೋಜನೆ ಪ್ರಕಟಿಸಿಲ್ಲ; ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿ ಸ್ವಾಭಿಮಾನದ ಬದುಕನ್ನು ನೀಡಿಲ್ಲ ಎಂದು ಆಕ್ಷೇಪಿಸಿದರು.
ಗ್ರೇಟರ್ ಬೆಂಗಳೂರು ಇವತ್ತು ವಾಟರ್ ಬೆಂಗಳೂರಾಗಿದೆ. ಸ್ವಲ್ಪ ಮಳೆಯಾದರೂ ಬೆಂಗಳೂರು ಮಹಾನಗರ ನೀರಿನಲ್ಲಿ ಮುಳುಗುವಂತಾಗಿದೆ. ಡಿ.ಕೆ.ಶಿವಕುಮಾರ್ ಅವರು ದೊಡ್ಡ ಯೋಜನೆಗಳ ಮಾತನಾಡುತ್ತಾರೆ. ಬೆಂಗಳೂರು ನಗರದಲ್ಲಿ ವೇಗದಿಂದ ಮತ್ತು ಸಕಾಲದಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿಲ್ಲ. ಮೆಟ್ರೊವನ್ನು ತುಮಕೂರಿಗೆ ಒಯ್ಯುವ ಮಾತನಾಡುತ್ತಾರೆ ಎಂದು ದೂರಿದರು.
ಅಭಿವೃದ್ಧಿ ಎಂಬುದು ಸಂಪೂರ್ಣ ಸ್ಥಗಿತ
ಅಭಿವೃದ್ಧಿ ಎಂಬುದು ಸಂಪೂರ್ಣವಾಗಿ ನಿಂತುಹೋಗಿದೆ. ಎರಡು ವರ್ಷದಲ್ಲಿ ಏನು ಮಾಡಿದ್ದಾರೆ? ಆಡಳಿತ ಪಕ್ಷದ ಶಾಸಕರು ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಬೇಸತ್ತಿರುವುದು ಜಗಜ್ಜಾಹೀರಾಗಿದೆ ಎಂದು ನುಡಿದರು. ಮೊದಲ ಬಾರಿ ಗೆದ್ದ ಶಾಸಕರಾದ ನಾವು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಶಾಲಾ ಕೊಠಡಿ ಕಟ್ಟಿಸಲೂ ಸಾಧ್ಯವಾಗುತ್ತಿಲ್ಲ ಎಂದು ವಿಜಯೇಂದ್ರ ಅವರು ಗಮನ ಸೆಳೆದರು.
ಶಾಸಕರಿಗೆ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕೊಡಲಾಗುತ್ತಿಲ್ಲ; ನೀರಾವರಿ ಸೌಕರ್ಯ ನೀಡಲು ಆಗುತ್ತಿಲ್ಲ; ಇಷ್ಟೆಲ್ಲ ಇದ್ದರೂ ರಾಜ್ಯ ಸರಕಾರ ದುಂದು ವೆಚ್ಚ ಮಾಡುತ್ತಿದೆ. ಸರಕಾರದ ಬಗ್ಗೆ ರಾಜ್ಯದ ಜನರು ನಗುತ್ತಿದ್ದಾರೆ; ಸರಕಾರದ ನಡವಳಿಕೆಯನ್ನು ಜನರು ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.
ಶೂನ್ಯ ಸಾಧನೆಯ ಸಾಧನಾ ಸಮಾವೇಶ
ಇದೊಂದು ಭಂಡ ಸರಕಾರ. ಜಾಹೀರಾತು ನೀಡುವ ಜಾಹೀರಾತಿನ ಸರಕಾರ ಇದು. ಗ್ಯಾರಂಟಿಗಳನ್ನೂ ಸರಿಯಾಗಿ ತಲುಪಿಸದೆ ನಾಡಿನ ಜನರಿಗೆ ಮೋಸ ಮಾಡಿದ್ದಾರೆ. ಶೂನ್ಯ ಸಾಧನೆಯ ಸಾಧನಾ ಸಮಾವೇಶ ಇದು ಎಂದು ಟೀಕಿಸಿದರು. ರಾಜ್ಯದ ಜನರಿಗೆ ಈ ಸರಕಾರದ ಬಗ್ಗೆ ಏನೂ ಒಳ್ಳೆಯ ಅಭಿಪ್ರಾಯ ಇಲ್ಲ ಎಂದು ನುಡಿದರು.
ಗ್ಯಾರಂಟಿಗಳನ್ನು ಪೂರೈಸಲು ಹಣ ಹೊಂದಿಸುವುದನ್ನು ಸರಕಾರ ಮಾಡಲೇಬೇಕು. ಆದರೆ, ಗ್ಯಾರಂಟಿ ಕೊಡುವುದೇ ಸಾಧನೆಯೇ? ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸ ಆಗಬಾರದೇ? ಎಂದು ಪ್ರಶ್ನೆಗೆ ಉತ್ತರ ನೀಡಿದರು. ಶಾಸಕರು ತಲೆ ಎತ್ತಿಕೊಂಡು ಓಡಾಡಲು ಆಗದ ಸ್ಥಿತಿ ಬಂದಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ಆಗುತ್ತಿಲ್ಲ; ಸೂರಿಲ್ಲದ ಬಡವರಿಗೆ ಮನೆ ಕೊಡಲು ಇವರಿಗೆ ಸಾಧ್ಯವಾಗಿದೆಯೇ? ಗಂಗಾ ಕಲ್ಯಾಣ ಯೋಜನೆಯಡಿ ಬಿಜೆಪಿ ಸರಕಾರ ಇದ್ದಾಗ ಪ್ರತಿ ಕ್ಷೇತ್ರಕ್ಕೆ 20-25 ಸಂಪರ್ಕ ಕೊಡುತ್ತಿದ್ದರು. ಈಗ ಒಂದು ಎರಡು ಎಂಬಂತೆ ಭಿಕ್ಷೆ ರೀತಿಯಲ್ಲಿ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಾಧನಾ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ..
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪ ಅವರು ಹೆಚ್ಚುವರಿ ಮೊತ್ತ ಕೊಡುತ್ತಿದ್ದರು. ಅದನ್ನೂ ನಿಲ್ಲಿಸಿದ್ದಾರೆ. ರೈತ ವಿದ್ಯಾನಿಧಿಯನ್ನೂ ನಿಲ್ಲಿಸಿದ್ದಾರೆ. ಒಂದೆಡೆ ಬಿಜೆಪಿ ಸರಕಾರದ ಯೋಜನೆಗಳನ್ನು ನಿಲ್ಲಿಸುತ್ತಾರೆ. ಅಭಿವೃದ್ಧಿಪರ ಚಿಂತನೆ ಸರಕಾರಕ್ಕೆ ಇಲ್ಲ. ಇದರ ನಡುವೆ ಸಾಧನಾ ಸಮಾವೇಶ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಜಾಹೀರಾತಿನ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ವಿಪಕ್ಷದವರು ಟೀಕಿಸುವುದಾಗಿ ಗೂಬೆ ಕೂರಿಸುತ್ತಾರೆ. ಆದರೆ, ಇವತ್ತು ಅಭಿವೃದ್ಧಿ ಇಲ್ಲದ ಕುರಿತು ಆಡಳಿತ ಪಕ್ಷದವರೇ ಮಾತನಾಡುತ್ತಿದ್ದಾರಲ್ಲವೇ ಎಂದು ಪ್ರಶ್ನಿಸಿದರು.
ನಾವು ರಾಜ್ಯ ಸರಕಾರವನ್ನು ಎಚ್ಚರಿಸಲು ನಿರಂತರ ಹೋರಾಟ ಮಾಡುತ್ತಿದ್ದೇವೆ. ಈಚೆಗೆ ಜನಾಕ್ರೋಶ ಯಾತ್ರೆಯನ್ನೂ ಮಾಡಿದ್ದೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಾಡಿನ- ಬೆಂಗಳೂರಿನ ಅಭಿವೃದ್ಧಿ ಶೂನ್ಯತೆಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಹೊಣೆ ಹೊರಬೇಕು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.