Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರ ದಿವಾಳಿ, ಕುಸಿದುಬಿದ್ದ ಆಡಳಿತ ಯಂತ್ರ: ಬಿ.ವೈ.ವಿಜಯೇಂದ್ರ ಆರೋಪ

BY Vijayendra
ಬೆಂಗಳೂರು: ನೌಕರರ ವೇತನಕ್ಕೂ ಹಣ ನೀಡಲಾಗದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಭ್ರಷ್ಟಾಚಾರ ಮಿತಿಮೀರಿ ಹೋಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಆರೋಪಿಸಿದ್ದಾರೆ. 
 
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವುದರಲ್ಲಿ ತೊಡಗಿದೆ ಎಂದು ದೂರಿದರು. ಆಡಳಿತ ಪಕ್ಷದ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ಮುಖ್ಯಮಂತ್ರಿ ಕುರ್ಚಿಗೆ ದಿನೇ ದಿನೇ ಪೈಪೋಟಿ ಹೆಚ್ಚಾಗಿದೆ. ಆಡಳಿತ ಪಕ್ಷದ ಶಾಸಕರು ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಒಮ್ಮೆ ಡಿ.ಕೆ.ಶಿವಕುಮಾರ್ ಬೆಂಬಲಿಗರು ದೆಹಲಿಗೆ ಹೋದರೆ ಮತ್ತೊಮ್ಮೆ ಸಿದ್ದರಾಮಯ್ಯ ಅವರ ಬೆಂಬಲಿಗರು ದೆಹಲಿಯಲ್ಲಿ ಬೀಡು ಬಿಡುತ್ತಾರೆ. ಇವರೇನು ನಮ್ಮ ರಾಜ್ಯದ ಶಾಸಕರೋ ಅಥವಾ ದೆಹಲಿ ಶಾಸಕರೋ ಎಂಬ ಅನುಮಾನ ಬರುತ್ತಿದೆ ಎಂದರು. 
 
 
ಧಾರವಾಡದಲ್ಲಿ ಆದಿತ್ಯ ಮ್ಯಾಗೇರಿ ಎಂಬ ಕಾಲೇಜಿಗೆ ಹೋಗುವ ಯುವಕನನ್ನು ಪೆÇಲೀಸ್ ಇಲಾಖೆಯವರು ಡ್ರಗ್ಸ್ ಪ್ರಕರಣನಲ್ಲಿ ವಿನಾಕಾರಣ ಸಿಲುಕಿಸಿದರು. ಅವನು ನಿರಪರಾಧಿ ಎಂದು ಗೊತ್ತಾದ ನಂತರವೂ ತಂದೆ ಇಲ್ಲದೆ ಇರುವ ಆತನ ತಾಯಿ ಪೀಡಿಸಿ ಸಾವಿರಾರು ರೂಪಾಯಿ ವಸೂಲಿ ಮಾಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆ ಎಷ್ಟೊಂದು ಕೀಳುಮಟ್ಟಕ್ಕೆ ಹೋಗಿದೆ ಎಂದು ಇದರಿಂದ ಗೊತ್ತಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮಾನ ಮರ್ಯಾದೆ ಇದ್ದರೆ ಈ ಘಟನೆಯಿಂದ ಎಚ್ಚೆತ್ತುಕೊಂಡು ಯಾವ ಅಧಿಕಾರಿಗಳು ಈ ಪ್ರಕರಣದ ಹಿಂದೆ ಇದ್ದಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಡ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. 
 
ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆ ಅಲ್ಪಸಂಖ್ಯಾತರಿಗೆ ಮತ್ತೆ 650 ಕೋಟಿ ರೂಪಾಯಿ ನೀಡಲು ತೀರ್ಮಾನ ಕೈಗೊಂಡಿದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಆದರೆ ಈ ಸರ್ಕಾರ ಮಾತ್ರ ಪದೇ ಪದೇ ಅಲ್ಪಸಂಖ್ಯಾತರನ್ನು ಓಲೈಸಲು ಹಣ ನೀಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಮತ ಹಾಕಿಲ್ಲವೇ ಎಂದು ಪ್ರಶ್ನಿಸಿದರು. 

ಹಿಂದೂಗಳಿಗೆ ಮುಖ್ಯಮಂತ್ರಿಗಳು ಅಪಮಾನ ಮಾಡುತ್ತಿರುವುದು ಅಕ್ಷಮ್ಯ ಅಪರಾಧ. ಈ ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಅಲ್ಪಸಂಖ್ಯಾತರನ್ನು ಓಲೈಸುವ ನಿರ್ಧಾರವನ್ನು ಪದೇ ಪದೇ ಕೈಗೊಳ್ಳುತ್ತಿರುವ ಈ ಸರ್ಕಾರವನ್ನು ರಾಜ್ಯದ ಜನ ಕ್ಷಮಿಸುವುದಿಲ್ಲ. ಹಿಂದೂಗಳಿಗೆ ಅಪಮಾನ ಸಲ್ಲದು ಎಂದರು. 
 
ರಾಜ್ಯ ಸರ್ಕಾರವು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಕೇಂದ್ರ ಸರ್ಕಾರದ ಮೇಲೆ ಪದೇ ಪದೇ ಆರೋಪ ಮಾಡುತ್ತಾ ಇದೆ. ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸಲು ಸಂಪುಟ ದರ್ಜೆ ಸಚಿವರನ್ನು ನೇಮಕ ಮಾಡಿಕೊಳ್ಳಲಿ. ಈ ಸರ್ಕಾರ ಕಳೆದ ಮೂರು ವರ್ಷಗಳಿಂದ ಏನು ಕಡಿದು ಕಟ್ಟೆ ಹಾಕಿದೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವುದು ಬಿಟ್ಟರೆ ಏನು ಮಾಡಿಲ್ಲ. ಜಲಜೀವನ್ ಮಿಷನ್ ಸೇರಿ ಬೇರೆ ಬೇರೆ ಯೋಜನೆಗಳಿಗೆ ಕೇಂದ್ರದಿಂದ ಏನು ಹಣ ಬರಬೇಕೊ ಅದು ಬರುತ್ತೆ. ನಿಮ್ಮ ಯೋಗ್ಯತೆಗೆ ಅಭಿವೃದ್ಧಿ ಯೋಜನೆಗೆ ಹಣ ಬಿಡುಗಡೆ ಮಾಡಿ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ರೂ. 25 ಕೋಟಿ ಕೊಡ್ತೇವೆ ಅಂತ ಹೇಳಿ ಆರು ತಿಂಗಳು ಆಯಿತು. ಶಾಸಕರು ಯೋಜನೆ ರೂಪಿಸಿಕೊಂಡು ಕಾಯುತ್ತಾ ಇದ್ದಾರೆ. ಆದರೆ ಸರ್ಕಾರ ಹಣವನ್ನು ಈವರೆಗೆ ನೀಡಿಲ್ಲ ಎಂದು ಆರೋಪಿಸಿದರು. 

ರಾಜ್ಯದ ಸರ್ಕಾರಿ ನೌಕರರಿಗೆ ಎರಡು ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ. ಇದರಿಂದಲೇ ಈ ಸರ್ಕಾರ ದಿವಾಳಿ ಆಗಿದೆ ಎಂದು ತಿಳಿಯುತ್ತದೆ. ಗುತ್ತಿಗೆದಾರರು ರಾಜ್ಯ ಸರ್ಕಾರದ ಧೋರಣೆಯಿಂದ ಬೇಸತ್ತು ಬೇರೆ ರಾಜ್ಯಗಳಿಗೆ ಓಡಿ ಹೋಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಕೇಂದ್ರ ಸರ್ಕಾರವನ್ನು ದೂರುವ ಬದಲು ರಾಜ್ಯ ಸರ್ಕಾರ ಏನು ಅಭಿವೃದ್ಧಿ ಮಾಡುತ್ತಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು. 
 
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ